ನವದೆಹಲಿ: ನಕಲಿ ಪಾಸ್ ಬಳಸಿ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರೋಪದಡಿ ಭಾರತೀಯ ಗಾಲ್ಫ್ ಒಕ್ಕೂಟದ ಸದಸ್ಯ ಸಂದೀಪ್ ವರ್ಮಾ ಅವರನ್ನು ಒಕ್ಕೂಟದಿಂದ ಅಮಾನತುಗೊಳಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಒಕ್ಕೂಟದ ಅಧ್ಯಕ್ಷ ಬ್ರಿಜೇಂದರ್ ಸಿಂಗ್, ‘ಭಾರತೀಯ ಗಾಲ್ಫ್ ಒಕ್ಕೂಟ (ಐಜಿಯು) ಆಡಳಿತ ಮಂಡಳಿ ಸದಸ್ಯ ಸಂದೀಪ್ ವರ್ಮಾ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗಂಭೀರ ಲೋಪ ಎಸಗಿದ್ದು, ಅವರ ವಿರುದ್ಧ ತನಿಖೆಯನ್ನು ಬಾಕಿ ಉಳಿಸಿ ಅಮಾನತುಗೊಳಿಸಲಾಗಿದೆ. ವರ್ಮಾ ಅವರು ಘೋರ ಅಪರಾಧ ಎಸಗಿದ್ದು, ಅಮಾನತಿಗೆ ಅರ್ಹರು. 10 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ’ ಎಂದಿದ್ದಾರೆ.
‘ಈ ಆರೋಪಗಳ ಕುರಿತು ಬಹಳಷ್ಟು ವಿದ್ಯುನ್ಮಾನ ಸಾಕ್ಷಿಗಳಿವೆ. ಅವೆಲ್ಲವೂ ವರ್ಮಾ ಅವರು ತಪ್ಪು ಎಸಗಿರುವುದನ್ನು ತೋರಿಸುತ್ತದೆ’ ಎಂದಿದ್ದಾರೆ.
ಆದರೆ ಆರೋಪವನ್ನು ವರ್ಮಾ ನಿರಾಕರಿಸಿದ್ದಾರೆ ಮತ್ತು ಆಧಾರ ರಹಿತ ಎಂದಿದ್ದಾರೆ. ‘ನನ್ನ ಬಳಿ ಅಗತ್ಯ ದಾಖಲೆಗಳಿದ್ದವು. ಜತೆಗೆ ಪಾಲ್ಗೊಳ್ಳಬೇಕಾದ ಸದಸ್ಯರ ಪಟ್ಟಿಯಲ್ಲೂ ನನ್ನ ಹೆಸರಿತ್ತು. ಹೀಗಾಗಿ ನಾನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡೆ’ ಎಂದಿದ್ದಾರೆ.
‘ನಾನು ಯಾವುದೇ ಮಾಹಿತಿಯನ್ನೂ ಮುಚ್ಚಿಟ್ಟಿಲ್ಲ. ಕಾರ್ಯಕ್ರಮ ವೀಕ್ಷಿಸಿದ ಸಾಕಷ್ಟು ಜನ ನನ್ನನ್ನು ನೋಡಿದ್ದಾರೆ. ಅಲ್ಲಿ ಪಾಲ್ಗೊಳ್ಳುವ ಮುನ್ನ ಹಲವು ಹಂತಗಳಲ್ಲಿ ಭದ್ರತಾ ಮತ್ತು ದಾಖಲೆ ತಪಾಸಣೆಗೆ ಒಳಪಟ್ಟಿದ್ದೇನೆ. ಹಾಗಿದ್ದರೆ ಅವೆಲ್ಲವೂ ಹುಸಿಯೇ? ಐಜಿಯು ಮಾಡಿರುವುದು ಆಧಾರ ರಹಿತ ಆರೋಪಗಳಾಗಿವೆ’ ಎಂದಿದ್ದಾರೆ.
‘ಕೇಂದ್ರ ಸರ್ಕಾರ ನನ್ನ ಹೆಸರನ್ನು ಪಾಲ್ಗೊಳ್ಳುವವರ ಪಟ್ಟಿಗೆ ಸೇರಿಸಿದೆ. ತಂಡದ ತರಬೇತುದಾರನೆಂದು ಗುರುತಿಸಿ ಸರ್ಕಾರ ಮಾನ್ಯತಾ ಪತ್ರವನ್ನು ನೀಡಿದೆ. ಆದರೆ ಐಜಿಯು ನನಗೆ ನೇರವಾಗಿ ನೀಡಿಲ್ಲ. ಲೋಪವಾಗಿದೆ ಎಂದು ಅಂದು ಹೇಳದ ಐಜಿಪಿ ಈಗ ಆರೋಪ ಮಾಡುತ್ತಿರುವುದೇಕೆ? ನನಗೆ ಉತ್ತರಿಸಲು 21 ದಿನಗಳ ಕಾಲಾವಕಾಶ ನೀಡಬೇಕಿತ್ತು. ಅದು ಪಾಲನೆಯಾಗಿಲ್ಲ’ ಎಂದು ವರ್ಮಾ ಹೇಳಿದ್ದಾರೆ.