ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತದ ವನಿತೆಯರ ಒಲಿಂಪಿಕ್ಸ್ ಕನಸು ಭಗ್ನ

ಹಾಕಿ: ಜಪಾನ್‌ ವಿರುದ್ಧ ಮುಗ್ಗರಿಸಿದ ಸವಿತಾ ಪೂನಿಯಾ ಬಳಗ
Published 19 ಜನವರಿ 2024, 16:16 IST
Last Updated 19 ಜನವರಿ 2024, 16:16 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಭಾರತದ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನ ನಿರ್ಣಯಕ್ಕೆ ಶುಕ್ರವಾರ ನಡೆದ ಪಂದ್ಯದಲ್ಲಿ 0–1ರಿಂದ ಜಪಾನ್‌ ವಿರುದ್ಧ ಮುಗ್ಗರಿಸಿತು. ಹೀಗಾಗಿ, ಭಾರತದ ಪ್ಯಾರಿಸ್‌ ಒಲಿಂಪಿಕ್ಸ್ ಪ್ರವೇಶದ ಕನಸು ಕಮರಿತು.

2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತದ ಮಹಿಳಾ ತಂಡವು, ಈ ಬಾರಿ ಒಲಿಂಪಿಕ್ಸ್‌ ಟಿಕೆಟ್ ಗಿಟ್ಟಿಸಲು ವಿಫಲವಾಗಿದೆ,   ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಮಾತ್ರ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲಿದೆ. ಹೀಗಾಗಿ, ತವರಿನಲ್ಲಿ ದೊರಕಿದ್ದ ಉತ್ತಮ ಅವಕಾಶವನ್ನು ಭಾರತದ ವನಿತೆಯರು ಕೈಚೆಲ್ಲಿದರು.

ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಸಿಕ್ಕ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದ ಕಾನಾ ಉರಾಟ (6ನೇ ನಿಮಿಷ) ಅವರು ಜಪಾನ್‌ ತಂಡಕ್ಕೆ ಮುನ್ನಡೆ ಒದಗಿಸಿದರು.  ಈ ಏಕೈಕ ಗೋಲನ್ನೇ ಕೊನೆಯವರೆಗೆ ಕಾಯ್ದುಕೊಂಡ ಜಪಾನ್‌ ತಂಡವು ಗೆಲುವು ಸಾಧಿಸಿ, ಮೂರನೇ ಸ್ಥಾನದೊಂದಿಗೆ ಪ್ಯಾರಿಸ್‌ ಒಲಂಪಿಕ್ಸ್‌ಗೆ ಅರ್ಹತೆ ಪಡೆಯಿತು. ಜಪಾನ್ ತಂಡದ ರಕ್ಷಣಾ ಪಡೆಯು ಭಾರತದ ಆಟಗಾರ್ತಿಯರು ಗೋಲು ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಯಿತು.

ಪಂದ್ಯದುದ್ದಕ್ಕೂ ಜಪಾನ್‌ ವನಿತೆಯರು ಪ್ರಾಬಲ್ಯ ಸಾಧಿಸಿದರು. 60 ನಿಮಿಷಗಳಲ್ಲಿ ಭಾರತಕ್ಕೆ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದವು. ಆದರೆ, ಅದರಲ್ಲಿ ಒಂದರಲ್ಲಿಯೂ ಗೋಲು ದಾಖಲಾಗಲಿಲ್ಲ.  ಕೊನೆಯ 11 ನಿಮಿಷಗಳಲ್ಲಿ ಭಾರತ ಮೂರು ಪೆನಾಲ್ಟಿ ಕಾರ್ನರ್‌ ಪಡೆದುಕೊಂಡಿತು. ಅಂತಿಮ ಒಂದೂವರೆ ನಿಮಿಷ ಇರುವಾಗ ಸಲೀಮಾ ಟೆಟೆಗೆ ಸಮಬಲ ಸಾಧಿಸಲು ಉತ್ತಮ ಅವಕಾಶ ಲಭಿಸಿತು. ಅವರೂ ಕೈಚೆಲ್ಲಿದರು.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3–4ರಿಂದ ಪರಾಭವಗೊಂಡಿದ್ದ ಭಾರತಕ್ಕೆ ಇದ್ದ ಕೊನೆಯ ಅವಕಾಶವೂ ಮುಚ್ಚಿಹೋಯಿತು. ಮತ್ತೊಂದೆಡೆ ಫೈನಲ್ ಪ್ರವೇಶಿಸಿರುವ ಜರ್ಮನಿ ಮತ್ತು ಅಮೆರಿಕ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ.

ನ್ಯೂಜಿಲೆಂಡ್‌ಗೆ ಐದನೇ ಸ್ಥಾನ: ಟೂರ್ನಿಯಲ್ಲಿ ಐದು ಮತ್ತು ಆರನೇ ಸ್ಥಾನದ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವು 3–1ರಿಂದ ಇಟಲಿಯನ್ನು ಮಣಿಸಿ ಐದನೇ ಸ್ಥಾನ ಪಡೆಯಿತು.

ನ್ಯೂಜಿಲೆಂಡ್‌ ಪರ ರೋಸ್ ಟೈನಾನ್ (7ನೇ ನಿಮಿಷ), ನಾಯಕಿ ಒಲಿವಿಯಾ ಮೆರ್ರಿ (10ನೇ) ಮತ್ತು ಹನ್ನಾ ಕಾಟರ್ (31ನೇ) ಗೋಲು ಗಳಿಸಿದರೆ, ಇಟಲಿಯ ಇವನ್ನಾ ಪೆಸ್ಸಿನಾ (21ನೇ) ಏಕೈಕ ಗೋಲು ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT