ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

5ನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡಕ್ಕೆ ಸೋಲು 
Published 13 ಏಪ್ರಿಲ್ 2024, 16:29 IST
Last Updated 13 ಏಪ್ರಿಲ್ 2024, 16:29 IST
ಅಕ್ಷರ ಗಾತ್ರ

ಪರ್ತ್‌: ಒಲಿಂಪಿಕ್ಸ್ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಪುರುಷರ ಹಾಕಿ ತಂಡ ಸೋಲಿನ ಸರಮಾಲೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಶನಿವಾರ ನಡೆದ ಐದನೇ ಹಾಗೂ ಅಂತಿಮ ಹಾಕಿ ಟೆಸ್ಟ್‌ ಪಂದ್ಯದಲ್ಲೂ ಆತಿಥೇಯ ಆಸ್ಟ್ರೇಲಿಯಾ 3–2 ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿತು. 

ಆಸ್ಟ್ರೇಲಿಯಾ ಸರಣಿಯನ್ನು 5–0 ಕ್ವೀನ್‌ಸ್ವೀಪ್ ಮಾಡಿತು. ಮೊದಲ ಪಂದ್ಯವನ್ನು 1–5 ರಿಂದ ಸೋತಿದ್ದ ಭಾರತ, ಎರಡನೇ ಟೆಸ್ಟ್‌ 2–4 ಹಾಗೂ ಮೂರು ಮತ್ತು ನಾಲ್ಕನೇ ಟೆಸ್ಟ್‌ ಅನ್ನು ಕ್ರಮವಾಗಿ 1–2 ಮತ್ತು 3–1 ರಿಂದ ಸೋತಿತ್ತು. ‌

ಉತ್ತಮ ಪ್ರದರ್ಶನ ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ ಹೋರಾಟ ತೋರಿದರೂ ಪ್ರಬಲ ಆಸ್ಟ್ರೇಲಿಯಾ ಎದುರು ಗೆಲ್ಲಲು ಆಗಲಿಲ್ಲ. ‌

ಭಾರತದ ಪರ ನಾಯಕ ಹರ್ಮನ್ ಪ್ರೀತ್ ಸಿಂಗ್ (4ನೇ ನಿಮಿಷ) ಮತ್ತು ಬಾಬಿ ಸಿಂಗ್ ಧಾಮಿ (53ನೇ ನಿ.) ಗೋಲು ಗಳಿಸಿದರೆ, ಆಸ್ಟ್ರೇಲಿಯಾ ಪರ ಜೆರೆಮಿ ಹೇವಾರ್ಡ್ (20ನೇ ನಿ.), ಕೀ ವಿಲ್ಲಾಟ್ (38ನೇ ನಿ.) ಮತ್ತು ಟಿಮ್ ಬ್ರಾಂಡ್ (39ನೇ ನಿ.) ಗೋಲು ಗಳಿಸಿದರು.

‍ಪ್ರವಾಸಿ ತಂಡದ ಆಟಗಾರರು ಆಕ್ರಮಣಕಾರಿಯಾಗಿ ಆಟ ಆರಂಭಿಸಿದರು. 4ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಅವರು ಪೆನಾಲ್ಟಿ ಕಾರ್ನರ್ ನಲ್ಲಿ ದೊರೆತ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಸರಣಿಯಲ್ಲಿ ಮೂರನೇ ಗೋಲು ಗಳಿಸಿದರು. 

20ನೇ ನಿಮಿಷದಲ್ಲಿ ಹೇವಾರ್ಡ್ ಗಳಿಸಿದ ಗೋಲಿನಿಂದ ಆಸ್ಟ್ರೇಲಿಯಾ ಸಮಬಲ ಸಾಧಿಸಿತು. ಸರಣಿಯಲ್ಲಿ ಏಳನೇ ಗೋಲು ದಾಖಲಿಸಿದರು.   

ಮೊದಲಾರ್ಧದ ಕೆಲವೇ ಸೆಕೆಂಡುಗಳಲ್ಲಿ ಆಸ್ಟ್ರೇಲಿಯಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡರೂ, ಗೋಲ್‌ ಕೀಪರ್‌ ಸೂರಜ್ ಕರ್ಕೇರಾ ತಮ್ಮ ಬಲಗಾಲಿನಿಂದ ಚೆಂಡು ಗೋಲು ಪೆಟ್ಟಿಗೆ ಸೇರುವುದನ್ನು ತಡೆದರು. 

ಕೊನೆ ಕ್ಷಣಗಳ ಬದಲಾವಣೆಯ ನಂತರ ಭಾರತ ಚುರುಕಿನ ಆಟ ಆರಂಭಿಸಿತು. 37ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಪಡೆದುಕೊಂಡಿತು. ಆದರೆ, ಹರ್ಮನ್‌ ಪ್ರೀತ್ ಅವರು ಚೆಂಡು ಅನ್ನು ಗುರಿ ಮುಟ್ಟಿಸಲು ಆಗಲಿಲ್ಲ.  

42ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಅಮಿತ್ ರೋಹಿದಾಸ್ ಯಶಸ್ಸು ಕಾಣಲಿಲ್ಲ. ಆತಿಥೇಯ ತಂಡಕ್ಕೂ ಎರಡು ಪೆನಾಲ್ಟಿ ಕಾರ್ನರ್‌ ದೊರೆಯಿತು. ಆದರೆ ಭಾರತದ ರಕ್ಷಣೆ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT