ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಡ್ರಾ ಪಂದ್ಯದಲ್ಲಿ ಭಾರತದ ಮಹಿಳೆಯರು

Last Updated 18 ಜನವರಿ 2021, 12:51 IST
ಅಕ್ಷರ ಗಾತ್ರ

ಬ್ಯೂನಸ್ ಐರಿಸ್‌: ಶರ್ಮಿಳಾ ದೇವಿ ಹಾಗೂ ದೀಪ್ ಗ್ರೇಸ್ ಎಕ್ಕಾ ಅವರು ಗಳಿಸಿದ ಗೋಲುಗಳ ನೆರವಿನೊಂದಿಗೆ ಭಾರತ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ಜೂನಿಯರ್ ತಂಡದೊಂದಿಗೆ 2–2ರ ಡ್ರಾ ಸಾಧಿಸಿತು. ಈ ಪಂದ್ಯದೊಂದಿಗೆ ಭಾರತ ಮಹಿಳಾ ತಂಡದ ಅರ್ಜೆಂಟೀನಾ ವಿರುದ್ಧದ ಅಭಿಯಾನ ಆರಂಭವಾಯಿತು.

ತೀವ್ರ ಪೈಪೋಟಿ ಕಂಡುಬಂದ ಹಣಾಹಣಿಯಲ್ಲಿ ಯುವ ಆಟಗಾರ್ತಿ ಶರ್ಮಿಳಾ (22ನೇ ನಿಮಿಷ) ಹಾಗೂ ಅನುಭವಿ ಎಕ್ಕಾ (31ನೇ ನಿಮಿಷ) ಗೋಲು ದಾಖಲಿಸಿದರು. ಆತಿಥೇಯ ತಂಡದ ಪರ ಪೌಲಾ ಸಂತಾಮರಿನಾ (28ನೇ ನಿಮಿಷ) ಹಾಗೂ ಬ್ರಿಸಾ ಬ್ರಗೆಸರ್‌ (48ನೇ ನಿಮಿಷ) ಕಾಲ್ಚಳಕ ತೋರಿ ಸಮಬಲ ಸಾಧಿಸಿದರು.

ಕೋವಿಡ್‌–19ತಡೆಯಲು ವಿಧಿಸಿದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತ ತಂಡವು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಆಟಗಾರ್ತಿಯರು ತೋರಿದ ಸಾಮರ್ಥ್ಯದ ಬಗ್ಗೆ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ದೀರ್ಘ ವಿರಾಮದ ಬಳಿಕ ಆಡಿದ್ದರಿಂದ ಈ ಪಂದ್ಯ ವಿಶಿಷ್ಟವಾಗಿತ್ತು. ಲಯ ಕಂಡುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಪಂದ್ಯದಲ್ಲಿ ಆಡಿದ ಭಾವ ಮೂಡಿಸಲು ತಂಡದ ಎಲ್ಲ 23 ಆಟಗಾರ್ತಿಯರಿಗೂ ಅವಕಾಶ ನೀಡಿದೆವು‘ ಎಂದು ಮ್ಯಾರಿಜ್‌ ಹೇಳಿದ್ದಾರೆ.

ಜನೆವರಿ 20ರಂದು ಅರ್ಜೆಂಟೀನಾ ಜೂನಿಯರ್ ತಂಡದ ವಿರುದ್ಧವೇ ಮತ್ತೊಂದು ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ.

ಜೂನಿಯರ್ ತಂಡದ ಜಯಭೇರಿ

ಬ್ಯೂಟಿ ಡಂಗ್‌ಡಂಗ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಭಾರತ ಜೂನಿಯರ್ ತಂಡದ ಜಯಕ್ಕೆ ಕಾರಣವಾದವು. ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ ಹಣಾಹಣಿಯಲ್ಲಿ ಆತಿಥೇಯ ಜೂನಿಯರ್ ತಂಡದ ವಿರುದ್ಧ ಭಾರತದ ಆಟಗಾರ್ತಿಯರು 5–3ರಿಂದ ಗೆದ್ದು ಸಂಭ್ರಮಿಸಿದರು.

ಜಾರ್ಖಂಡ್‌ನ ಬ್ಯೂಟಿ 29, 38 ಹಾಗೂ 52ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಲಾಲ್ರಿಂದಿಕಿ (14ನೇ ನಿ.), ಸಂಗೀತಾ ಕುಮಾರಿ (30ನೇ ನಿ.) ಮೂಲಕ ಎರಡು ಗೋಲುಗಳು ಮೂಡಿಬಂದವು.

ಚಿಲಿ ತಂಡದ ಸಿಮೊನ್ ಅವೇಲಿ (10ನೇ ನಿ.), ಪೌಲಾ ಸ್ಯಾಂಜ್‌ (25ನೇ ನಿ.) ಹಾಗೂ ಫರ್ನಾಂಡಾ ಅರಿಯೆಟಾ (49ನೇ ನಿ.) ಕಾಲ್ಚಳಕ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT