ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಫಡೆರೇಷನ್‌ಗೆ ಅಡ್‌ಹಾಕ್ ಸಮಿತಿ ನೇಮಕ

Published 27 ಡಿಸೆಂಬರ್ 2023, 15:34 IST
Last Updated 27 ಡಿಸೆಂಬರ್ 2023, 15:34 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಆಡಳಿತವನ್ನು ನೋಡಿಕೊಳ್ಳಲು ಮೂವರು ಸದಸ್ಯರ ಅಡ್‌ಹಾಕ್ ಸಮಿತಿಯನ್ನು ಭಾರತ ಒಲಿಂಪಿಕ್ ಸಂಸ್ಥೆ ನೇಮಕ ಮಾಡಿದೆ.

ಭಾರತ ವುಷು ಸಂಸ್ಥೆ ಅಧ್ಯಕ್ಷ ಭೂಪಿಂದರ್ ಸಿಂಗ್ ಬಜ್ವಾ ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಒಲಿಂಪಿಯನ್ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಮತ್ತು ಅಂತರರಾಷ್ಟ್ರೀಯ ಮಾಜಿ ಬ್ಯಾಡ್ಮಿಂಟನ್ ಪಟು ಮಂಜುಷಾ ಕನ್ವರ್ ಸಮಿತಿಯಲ್ಲಿದ್ದಾರೆ ಎಂದು ಬುಧವಾರ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಪ್ರಕಟಿಸಿದೆ.

ಹೋದ ವಾರ ಕುಸ್ತಿ ಫಡೆರೇಷನ್‌ಗೆ (ಡಬ್ಲ್ಯುಎಫ್ಐ) ನಡೆದಿದ್ದ ಚುನಾವಣೆಯಲ್ಲಿ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಅವರು ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್ ದಿನಾಂಕಗಳನ್ನು ತರಾತುರಿಯಲ್ಲಿ ಘೋಷಿಸಿದ್ದರು.

ಈ ಕ್ರಮವು ಕಾನೂನುಬಾಹಿರ ಎಂದು ಹೇಳಿದ್ದ ಐಒಎ, ನೂತನ  ಸಮಿತಿಯನ್ನು ಅಮಾನತು ಮಾಡಿತ್ತು. ಅದರಿಂದಾಗಿ ಡಬ್ಲ್ಯುಎಫ್‌ಐ ಆಡಳಿತ ನಿರ್ವಹಿಸಲು ಅಡ್‌ಹಾಕ್ (ಹಂಗಾಮಿ) ಸಮಿತಿಯನ್ನು ನೇಮಕ ಮಾಡಿದೆ.

‘ಇದು ಒಲಿಂಪಿಕ್ ವರ್ಷ. ಆದ್ದರಿಂದ ಪೂರ್ವಸಿದ್ಧತೆಗಳು ಭರದಿಂದ ನಡೆಯಬೇಕು. ಸೀನಿಯರ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುತ್ತೇವೆ. ರಾಷ್ಟ್ರೀಯ ಶಿಬಿರಗಳನ್ನು ನಡೆಸಲು ಹಾಗೂ ನಮ್ಮ ತಂಡವು ಹೆಚ್ಚು ಪದಕಗಳನ್ನು ಜಯಿಸುವಂತೆ ಸಿದ್ಧಗೊಳಿಸಲು ಸಮಿತಿಯು ನಿಗಾವಹಿಸಲಿದೆ’ ಎಂದು ಭೂಪಿಂದರ್ ಬಜ್ವಾ ತಿಳಿಸಿದ್ದಾರೆ.

‘ಕುಸ್ತಿ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಒಲಿಂಪಿಕ್ ಕೂಟದಲ್ಲಿ ದೇಶಕ್ಕೆ ಹೆಚ್ಚು ಪದಕಗಳನ್ನು ತಂದುಕೊಟ್ಟ ಕ್ರೀಡೆಯೂ ಹೌದು. ಉಜ್ವಲ ಭವಿಷ್ಯವೂ ಇದೆ. ಆದನ್ನು ಕೈತಪ್ಪದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ‘ ಎಂದೂ ಅವರು ಹೇಳಿದ್ದಾರೆ.

ಚುನಾವಣೆಗೂ ಮುನ್ನ ಇದ್ದ ಅಡ್‌ಹಾಕ್ ಸಮಿತಿಗೂ ಬಜ್ವಾ ಅವರು ಮುಖ್ಯಸ್ಥರಾಗಿದ್ದರು. ಹೋದ  ಏಪ್ರಿಲ್‌ನಲ್ಲಿ ಆ ಸಮಿತಿಯು ನೇಮಕವಾಗಿತ್ತು.

ಡಿಸೆಂಬರ್ 21ರಂದು ನಡೆದ ಚುನಾವಣೆಯಲ್ಲಿ ಗೆದ್ದ ಸಂಜಯ್ ಅವರು, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಆರೋಪಿ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ಆಪ್ತರಾಗಿದ್ದರು. ಆದ್ದರಿಂದ ಖ್ಯಾತನಾಮ ಕುಸ್ತಿಪಟುಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಒಲಿಂಪಿಕ್ ಪದಕವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಪ್ರತಿಭಟನಾರ್ಥವಾಗಿ ನಿವೃತ್ತಿ ಘೋಷಿಸಿದ್ದರು. ಬಜರಂಗ್ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿ, ಕರ್ತವ್ಯಪಥದ ಪಾದಚಾರಿ ಮಾರ್ಗದ ಮೇಲೆ ಇಟ್ಟು ಬಂದಿದ್ದರು. ವಿನೇಶಾ ಫೋಗಾಟ್ ಅವರೂ ತಮ್ಮ ಅರ್ಜುನ ಮತ್ತು ಖೇಲ್‌ರತ್ನ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT