ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ರಂಗು ತುಂಬಲಿದೆ ಕರ್ನಾಟಕ ಪ್ರೊ ಕಬಡ್ಡಿ

ಪ್ರೊ ಕಬಡ್ಡಿ ಮಾದರಿಯಲ್ಲಿ ನಡೆಯಲಿರುವ ಲೀಗ್‌: ಕರ್ನಾಟಕ ಅಮೆಚೂರ್‌ ಕಬಡ್ಡಿ ಸಂಸ್ಥೆಯಿಂದ ಹೊಸ ಪ್ರಯತ್ನ
Last Updated 6 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನಲ್ಲಿ (ಪಿಕೆಎಲ್‌) ಆಡುವ ಅವಕಾಶ ಸಿಗದೆ ನಿರಾಸೆ ಕಂಡಿದ್ದ ಕರ್ನಾಟಕದ ಆಟಗಾರರಿಗೆ ತಮ್ಮ ಸಾಮರ್ಥ್ಯ ಜಗಜ್ಜಾಹೀರುಗೊಳಿಸಲು ಈಗ ಸುವರ್ಣಾವಕಾಶವೊಂದು ಲಭಿಸಿದೆ.

ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯು, ಪ್ರೊ ಕಬಡ್ಡಿ ಮಾದರಿಯಲ್ಲಿ ಕರ್ನಾಟಕ ‍ಪ್ರೊ ಕಬಡ್ಡಿ (ಕೆಪಿಕೆ) ಆಯೋಜಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ಮುಂದಿನ ವರ್ಷದ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಈ ಲೀಗ್‌ ನಡೆಯಲಿದೆ.

ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ಎಂಟು ದಿನಗಳ ಕಾಲ ನಡೆಯುವ ಕೆಪಿಕೆಯಲ್ಲಿ ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

‘ಕರ್ನಾಟಕದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಹೀಗಿದ್ದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಿಕೆಎಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಉಳಿದವರಿಗೂ ಪಿಕೆಎಲ್‌ನ ಅನುಭವ ಸಿಗಬೇಕೆಂಬುದು ನಮ್ಮ ಉದ್ದೇಶ. ಈ ಕಾರಣದಿಂದಲೇ ಕರ್ನಾಟಕ ಪ್ರೊ ಕಬಡ್ಡಿ ಆಯೋಜಿಸಲು ನಿರ್ಧರಿಸಿದ್ದೇವೆ. ರಾಜ್ಯದ ಮಟ್ಟಿಗೆ ಇದು ಹೊಸ ಪ್ರಯತ್ನ. ಮಂಗಳೂರಿನಲ್ಲಿ ಎಂಟು ದಿನಗಳ ಕಾಲ 16 ಪಂದ್ಯಗಳು ನಡೆಯಲಿದ್ದು, ಸುಕೇಶ್‌ ಹೆಗ್ಡೆ, ಪ್ರಶಾಂತ್ ಕುಮಾರ್‌ ರೈ, ಜೀವಕುಮಾರ್‌ ಸೇರಿದಂತೆ ಹಲವು ‘ಸ್ಟಾರ್‌’ ಆಟಗಾರರು ಇದರಲ್ಲಿ ಆಡಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಬಿ.ಸಿ.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಭಾನ್ವೇಷಣೆಯ ಉದ್ದೇಶದಿಂದ 16ರಿಂದ 21 ವರ್ಷದೊಳಗಿನವರ ವಿಭಾಗದ ಆಟಗಾರರಿಗೂ ಲೀಗ್‌ನಲ್ಲಿ ಆಡಲು ಅವಕಾಶ ನೀಡಿದ್ದೇವೆ. ಪ್ರತಿ ತಂಡದಲ್ಲಿ ಗರಿಷ್ಠ 15 ಆಟಗಾರರು ಇರಲಿದ್ದಾರೆ. 30 ಮಂದಿ ತೀರ್ಪುಗಾರರು ಲೀಗ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ರೆಫರಿಗಳ ಮಂಡಳಿಯ ಮುಖ್ಯಸ್ಥ ಎಂ.ಷಣ್ಮುಗಂ ಅವರು ಮಾಹಿತಿ ನೀಡಿದರು.

‘16 ರಿಂದ 21 ವರ್ಷದೊಳಗಿನವರ (ಉದಯೋನ್ಮುಖ) ಆಟಗಾರರ ಆಯ್ಕೆಗಾಗಿ ಇದೇ ತಿಂಗಳ 13 ಮತ್ತು 14ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ನಡೆಸಲಾಗುತ್ತದೆ. 75 ಕೆ.ಜಿ. ದೇಹ ತೂಕ ಹೊಂದಿರುವವರು ಈ ವಿಭಾಗದ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ‘ಎ’ ಮತ್ತು ‘ಬಿ’ ದರ್ಜೆಯ ಆಟಗಾರರಿಗೆ (85 ಕೆ.ಜಿ ತೂಕ ಇರಲೇಬೇಕು) 15ರಂದು ಟ್ರಯಲ್ಸ್‌ ನಡೆಯಲಿದೆ’ ಎಂದೂ ಷಣ್ಮುಗಂ ವಿವರಿಸಿದರು.

ಬಹುಮಾನ ಮೊತ್ತ: ಲೀಗ್‌ನಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ ₹5 ಲಕ್ಷ ಬಹುಮಾನ ಸಿಗಲಿದ್ದು, ರನ್ನರ್ಸ್‌ ಅಪ್‌ ತಂಡ ₹ 3 ಲಕ್ಷ ಜೇಬಿಗಿಳಿಸಲಿದೆ. ತೃತೀಯ ಸ್ಥಾನ ಪಡೆಯುವ ಎರಡು ತಂಡಗಳಿಗೆ ತಲಾ ₹1.5 ಲಕ್ಷ ಬಹುಮಾನ ನೀಡಲಾಗುತ್ತದೆ.

ಲೀಗ್‌ನಲ್ಲಿ ಭಾಗವಹಿಸುವ ‘ಐಕಾನ್‌’ ಆಟಗಾರರಿಗೆ ತಲಾ ₹1 ಲಕ್ಷ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ. ‘ಎ’ ಮತ್ತು ‘ಬಿ’ ದರ್ಜೆಯ ಆಟಗಾರರಿಗೆ ಕ್ರಮವಾಗಿ ₹50 ಮತ್ತು ₹25 ಸಾವಿರ ಸಿಗಲಿದೆ. ‘ಸಿ’ ಮತ್ತು ‘ಡಿ’ ದರ್ಜೆಯ ಆಟಗಾರರು ಕ್ರಮವಾಗಿ ₹ 25 ಮತ್ತು ₹ 10 ಸಾವಿರ ಪ್ರೋತ್ಸಾಹ ಧನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT