ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಯಲ್ಲಿ ಎಡವಿದ ಲಕ್ಷ್ಯ ಸೇನ್

ಬ್ಯಾಡ್ಮಿಂಟನ್‌: ಫೈನಲ್‌ಗೆ ಕುನ್ಲಾವುಟ್‌ ವಿಟಿಡ್‌ಸರ್ನ್‌
Published 3 ಜೂನ್ 2023, 14:47 IST
Last Updated 3 ಜೂನ್ 2023, 14:47 IST
ಅಕ್ಷರ ಗಾತ್ರ

ಬ್ಯಾಂಕಾಕ್‌ : ಮೊದಲ ಗೇಮ್‌ ಗೆದ್ದರೂ, ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟ ಭಾರತದ ಲಕ್ಷ್ಯ ಸೇನ್‌ ಅವರು ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತರು.

ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ದೇಶದ ಭರವಸೆ ಎನಿಸಿರುವ ಕುನ್ಲಾವುಟ್‌ ವಿಟಿಡ್‌ಸರ್ನ್‌ 13-21, 21-17, 21-13 ರಿಂದ ಲಕ್ಷ್ಯ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು.

ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕುನ್ಲಾವುಟ್‌ ಅವರು ಹಾಂಗ್‌ಕಾಂಗ್‌ನ ಲೀ ಚುಕ್ ಯಿಯು ವಿರುದ್ಧ ಹಣಾಹಣಿ ನಡೆಸುವರು. ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಲೀ 21–14, 21–16 ರಲ್ಲಿ ಫ್ರಾನ್ಸ್‌ನ ಟೋಮ ಜೂನಿಯರ್‌ ಪೊಪೊವ್ ವಿರುದ್ಧ ಗೆದ್ದರು.

21 ವರ್ಷದ ಲಕ್ಷ್ಯ ಅವರು ಮೊದಲ ಗೇಮ್‌ನ ಆರಂಭದಲ್ಲಿ ಶಿಸ್ತಿನ ಆಟವಾಡಿ 11–6 ರಲ್ಲಿ ಮುನ್ನಡೆ ಸಾಧಿಸಿದರು. ಮರುಹೋರಾಟ ನಡೆಸಿದ ಕುನ್ಲಾವುಟ್‌ ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿದರು. ಆದರೆ ಈ ಹಂತದಲ್ಲಿ ಭಾರತದ ಆಟಗಾರ ಆಕರ್ಷಕ ಹೊಡೆಗಳ ಮೂಲಕ ಲೀಡ್‌ ಹೆಚ್ಚಿಸಿ, ಎದುರಾಳಿಗೆ ಯಾವುದೇ ಅವಕಾಶ ನೀಡದ ಗೇಮ್‌ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ 10–10ರ ವರೆಗೆ ಇಬ್ಬರೂ ಜಿದ್ದಾಜಿದ್ದಿನಿಂದ ಸೆಣಸಾಡಿದರು. ಈ ವೇಳೆ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ನಿಖರ ಡ್ರಾಪ್ ಶಾಟ್‌ಗಳ ಮೂಲಕ ಸತತ ಪಾಯಿಂಟ್ಸ್‌ ಕಲೆಹಾಕಿದ ಕುನ್ಲಾವುಟ್‌ ಮುನ್ನಡೆ ಪಡೆದರು. ಆ ಬಳಿಕ ನಾಲ್ಕು ಪಾಯಿಂಟ್ಸ್‌ಗಳ ಲೀಡ್‌ನೊಂದಿಗೆ ಗೇಮ್‌ ಗೆದ್ದರು.

ನಿರ್ಣಾಯಕ ಗೇಮ್‌ನ ಆರಂಭದಲ್ಲಿ 5–2 ರ ಮುನ್ನಡೆ ಪಡೆದ ಥಾಯ್ಲೆಂಡ್‌ನ ಆಟಗಾರ, ಎದುರಾಳಿಯ ಮೇಲೆ ಒತ್ತಡ ಹೇರಿದರು. ದೀರ್ಘ ರ್‍ಯಾಲಿಗಳನ್ನು ಆಡುವಾಗ ಬಳಲಿದಂತೆ ಕಂಡುಬಂದ ಲಕ್ಷ್ಯ, ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಇದರಿಂದ ಲೀಡ್‌ನ್ನು 18–12ಕ್ಕೆ ಹೆಚ್ಚಿಸಿಕೊಂಡ ಕುನ್ಲಾವುಟ್‌, ಭಾರತದ ಆಟಗಾರನಿಗೆ ಮರುಹೋರಾಟ ನಡೆಸಲು ಅವಕಾಶ ನೀಡದೆ ಫೈನಲ್‌ಗೆ ಲಗ್ಗೆಯಿಟ್ಟರು.

ಮರಿನ್‌ಗೆ ಆಘಾತ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ದಕ್ಷಿಣ ಕೊರಿಯದ ಆನ್‌ ಸೆ ಯಾಂಗ್ ಮತ್ತು ಚೀನಾದ ಬಿಂಗ್‌ ಜಿಯಾವೊ ಹಣಾಹಣಿ ನಡೆಸುವರು.

ವಿಶ್ವದ ಎರಡನೇ ರ್‍ಯಾಂಕ್‌ನ ಆಟಗಾರ್ತಿ ಯಾಂಗ್‌, ಸೆಮಿಫೈನಲ್‌ನಲ್ಲಿ 21–16, 21–12 ರಲ್ಲಿ ಸ್ಪೇನ್‌ನ ಕರೋಲಿನಾ ಮರಿನ್‌ಗೆ ಆಘಾತ ನೀಡಿದರು. ಜಿಯಾವೊ ಅವರು 21–13, 21–18 ರಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಕ್‌ಫೆಲ್ಟ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT