ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಯುವ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ಖಂಡಿತವಾಗಿಯೂ ಪದಕಕ್ಕೆ ಅರ್ಹರಾಗಿದ್ದರು ಎಂದು ಚಿನ್ನದ ಪದಕ ವಿಜೇತ, ಎರಡು ಬಾರಿಯ ವಿಶ್ವ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 22 ವರ್ಷದ ಲಕ್ಷ್ಯ ಸೇನ್ ಅವರು ಸೆಮಿಫೈನಲ್‌ನಲ್ಲಿ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಸೋಲು ಕಂಡಿದ್ದರು. ಬಳಿಕ ನಡೆದ ಪಂದ್ಯದಲ್ಲಿ ಮಲೇಷ್ಯಾದ ಝೀ ಜಿಯಾ ಲೀ ವಿರುದ್ಧ ಸೋಲುವುದರೊಂದಿಗೆ ಕಂಚಿನ ಪದಕ ಕೈತಪ್ಪಿತು. ಅಲ್ಲದೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮತ್ತೊಂದೆಡೆ ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್ಸನ್ ಅವರು ಸತತ ಎರಡನೇ ಬಾರಿ ಚಿನ್ನ ಪದಕ ಜಯಿಸಿದರು. ಫೈನಲ್‌ನಲ್ಲಿ ವಿಕ್ಟರ್ ವಿಶ್ವ ಚಾಂಪಿಯನ್, ಥಾಯ್ಲೆಂಡ್‌ನ ಕುನ್ಲಾವತ್ ವಿತಿಸಾರ್ನ್ ವಿರುದ್ಧ ಜಯಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಅಭಿಯಾನ ಅಂತ್ಯಗೊಂಡ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಲಕ್ಷ್ಯ ಸೇನ್ ಹಾಕಿರುವ ಪೋಸ್ಟ್‌ಗೆ ವಿಕ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
'ಮುಂದಕ್ಕೆ ಸಾಗು ಸಹೋದರ. ನಿಮ್ಮ ಸಾಧನೆ ಬಗ್ಗೆ ನಿಜವಾಗಿಯೂ ಹೆಮ್ಮೆಪಟ್ಟುಕೊಳ್ಳಬಹುದು. ಸೆಮಿಫೈನಲ್‌ಗೆ ಅರ್ಹತೆ ಪಡೆದ ಎಲ್ಲ ಸ್ಪರ್ಧಿಗಳಿಗೂ ಪದಕ ಸಿಗಬೇಕೆಂದು ಆಶಿಸುತ್ತೇನೆ. ನೀವು ಖಂಡಿತವಾಗಿಯೂ ಪದಕಕ್ಕೆ ಅರ್ಹರಾಗಿದ್ದೀರಿ. ಕ್ರೀಡಾಕೂಟದಲ್ಲಿ ಅಧ್ಭುತ ಪ್ರದರ್ಶನ ನೀಡಿದ ನಿಮಗೆಲ್ಲರಿಗೂ ಅಭಿನಂದನೆಗಳು' ಎಂದು ಹೇಳಿದ್ದಾರೆ.
Keep going brother. You can be really proud of yourself. Wish all semifinalsts could get a medal as you definitely deserve one.
— Viktor Axelsen (@ViktorAxelsen) August 7, 2024
Congrats to you all on a fantastic performance at the Games.
ಈ ಮೊದಲು ಸೆಮಿಫೈನಲ್ ಪಂದ್ಯದ ಬಳಿಕ ತಮ್ಮ ಎದುರಾಳಿ ಲಕ್ಷ್ಯ ಅವರನ್ನು ಹೊಗಳಿದ್ದ ಆಕ್ಸೆಲ್ಸನ್, 'ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರ ಚಿನ್ನದ ಪದಕ ಜಯಿಸುವ ನೆಚ್ಚಿನ ತಾರೆ' ಎಂದು ಭವಿಷ್ಯ ನುಡಿದಿದ್ದರು.
'ಲಕ್ಷ್ಯ ಸೇನ್ ಅದ್ಭುತ ಪ್ರತಿಭೆ. ಅವರು ಪ್ರಬಲ ಸ್ಪರ್ಧಿ ಎಂಬುದನ್ನು ಈ ಒಲಿಂಪಿಕ್ಸ್‌ನಲ್ಲಿ ನಿರೂಪಿಸಿದ್ದಾರೆ. ಇನ್ನೂ ನಾಲ್ಕು ವರ್ಷಗಳಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಾರೆಗಳಲ್ಲಿ ಒಬ್ಬರಾಗಿರುತ್ತಾರೆ. ಅವರಿಗೆ ಶುಭ ಹಾರೈಸುತ್ತೇನೆ' ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.