ಶತೋಹು, ಪ್ಯಾರಿಸ್: ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮನು ಭಾಕರ್ ಈಗ ಮೂರನೇಯದಕ್ಕೆ ಗುರಿಯಿಟ್ಟಿದ್ದಾರೆ.
ಶುಕ್ರವಾರ ಶತೋಹು ಶೂಟಿಂಗ್ ರೇಂಜ್‌ನಲ್ಲಿ ನಡೆದ 25 ಮೀ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಅವರು ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸಿದರು. 22 ವರ್ಷದ ಮನು ಶನಿವಾರ ನಡೆಯಲಿರುವ ಫೈನಲ್ ಸುತ್ತಿನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.
ಈ ಒಲಿಂಪಿಕ್ಸ್‌ನಲ್ಲಿ ಮನು ಅವರು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ (ಸರಬ್ಜೋತ್‌ಸಿಂಗ್ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಒಂದೇ ಒಲಿಂಪಿಕ್ ಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ಮೂರನೇ ಪದಕವೂ ಅವರ ಕೊರಳಿಗೇರುವ ನಿರೀಕ್ಷೆ ಅಪಾರವಾಗಿದೆ. 25 ಮೀ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯು ಅವರಿಗೆ ಅತ್ಯಂತ ನೆಚ್ಚಿನದ್ದು. ಈ ಹಿಂದೆ ನಡೆದ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಈ ವಿಭಾಗಗಳಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ.
ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿಯೂ ಅವರು ಶಿಸ್ತುಬದ್ಧ ಮತ್ತು ನಿಖರವಾದ ಗುರಿ ಸಾಧಿಸಿದರು. ಪ್ರಿಸಿಸನ್ ಮತ್ತು ರ‍್ಯಾಪಿಡ್ ಅರ್ಹತಾ ಸುತ್ತುಗಳಲ್ಲಿ ಒಟ್ಟು 590 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಹಂಗೆರಿ ವೆರೋನಿಕಾ ಮೇಜರ್ (592) ಅವರು ಒಲಿಂಪಿಕ್ ದಾಖಲೆಯನ್ನು ಸರಿಗಟ್ಟಿ ಮೊದಲ ಸ್ಥಾನ ಗಳಿಸಿದರು.
ಕೋಚ್ ಜಸ್ಪಾಲ್ ರಾಣಾ ಅವರ ಬಳಿ ತರಬೇತಿ ಪಡೆದಿರುವ ಮನು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅರ್ಹತಾ ವಿಭಾಗದಲ್ಲಿ ಕಠಿಣ ಸ್ಪರ್ಧೆ ಇದ್ದ ಪ್ರಿಸಿಷನ್ ಸುತ್ತಿನಲ್ಲಿ 97, 98 ಮತ್ತು 99ರ ಸ್ಕೋರ್ ಗಳಿಸಿದರು. ರ‍್ಯಾಪಿಡ್ ರೌಂಡ್‌ನಲ್ಲಿ ಅವರು ಶ್ರೇಷ್ಠ ಪ್ರದರ್ಶನ ನೀಡಿದರು. 100, 98 ಹಾಗೂ 98ರ ಸ್ಕೋರ್ ನೊಂದಿಗೆ ಒಟ್ಟು 296 ಅಂಕ ಗಳಿಸಿದರು.
ಇಶಾ ಸಿಂಗ್‌ಗೆ 18ನೇ ಸ್ಥಾನ: ಭಾರತದ ಉದಯೋನ್ಮುಖ ಶೂಟರ್ ಇಶಾ ಸಿಂಗ್ 581 ಅಂಕ ಗಳಿಸಿದರು. ಅದರೊಂದಿಗೆ 18ನೇ ಸ್ಥಾನ ಪಡೆದರು. ಅವರು ಪ್ರಿಸಿಷನ್‌ನಲ್ಲಿ 291 ಮತ್ತು ರ‍್ಯಾಪಿಡ್‌ನಲ್ಲಿ 290 ಸ್ಕೋರ್ ಗಳಿಸಿದರು.
ಅರ್ಹತಾ ಸುತ್ತಿನಲ್ಲಿ ಒಟ್ಟು 40 ಸ್ಪರ್ಧಿಗಳು ಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.