ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಓಪನ್ ಬ್ಯಾಡ್ಮಿಂಟನ್: ಮನು ಅತ್ರಿ, ಸುಮೀತ್‌ ಪಾರಮ್ಯ

ಅಶ್ವಿನಿ ಪೊನ್ನಪ್ಪ–ಸಿಕ್ಕಿ ರೆಡ್ಡಿ, ಸಾತ್ವಿಕ್ ಸಾಯಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿಗಳಿಗೆ ನಿರಾಸೆ
Last Updated 12 ಸೆಪ್ಟೆಂಬರ್ 2018, 15:52 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಮಲೇಷ್ಯಾ ಜೋಡಿಯನ್ನು ಮಣಿಸಿದ ಭಾರತದ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾರಮ್ಯ ಮೆರೆದಿದ್ದಾರೆ.

ಬುಧವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಭಾರತದ ಆಟಗಾರರು ಮಲೇಷ್ಯಾದ ಗೋಹ್‌ ವಿ.ಶೆಮ್‌ ಮತ್ತು ತಾನ್‌ ವೀ ಕ್ಯಾಂಗ್ ಅವರನ್ನು 15–21, 23–21, 21–19ರಿಂದ ಮಣಿಸಿದರು.

ಮೊದಲ ಗೇಮ್‌ನಲ್ಲಿ ಸೋತ ಮನು ಮತ್ತು ಸುಮೀತ್‌ ಎರಡನೇ ಗೇಮ್‌ನಲ್ಲೂ ಸೋಲಿನ ಸುಳಿಯಲ್ಲಿ ಬಿದ್ದಿದ್ದರು. 17–19ರಿಂದ ಹಿನ್ನಡೆ ಅನುಭವಿಸಿದ್ದ ಈ ಜೋಡಿ ನಂತರ ಚೇತರಿಸಿಕೊಂಡಿತು. ನಿರ್ಣಾಯಕ ಮೂರನೇ ಗೇಮ್‌ನಲ್ಲೂ ಪ್ರಬಲ ಪೈಪೋಟಿ ನಡೆಯಿತು. ಛಲ ಬಿಡದ ಭಾರತದ ಜೋಡಿ ಗೇಮ್‌ ಗೆದ್ದು ಪಂದ್ಯವನ್ನೂ ಗೆದ್ದು ಸಂಭ್ರಮಿಸಿತು. ಪಂದ್ಯ ಒಟ್ಟ 54 ನಿಮಿಷ ನಡೆಯಿತು.

ಮುಂದಿನ ಪಂದ್ಯದಲ್ಲಿ ಈ ಜೋಡಿ ಚೀನಾದ ಹಿ ಜಿತಿಂಗ್‌ ಮತ್ತು ಕಿಯಾಂಗ್ ಜೋಡಿಯನ್ನು ಎದುರಿಸುವರು.

ಅಶ್ವಿನಿ ಜೋಡಿಗೆ ನಿರಾಸೆ: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದಿತು. ಪುರುಷರ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ನಿರಾಸೆ ಕಂಡರು.

ಅಶ್ವಿನಿ ಮತ್ತು ಸಿಕ್ಕಿ ಜೋಡಿ ದಕ್ಷಿಣ ಕೊರಿಯಾದ ಚಾಂಗ್ ಯೇ ನಾ ಹಾಗೂ ಜಾಂಗ್ ಕ್ಯುಂಗ್‌ ಯಾನ್‌ ಅವರ ವಿರುದ್ಧ 17–21, 13–21ರಿಂದ ಸೋತರು. ಸಾತ್ವಿಕ್‌ ಮತ್ತು ಚಿರಾಗ್‌ ಜಪಾನ್‌ನ ತಕೇಶಿ ಕಮುರಾ ಮತ್ತು ಕೀಗೊ ಸೊನೊಡಾ ಎದುರು 12–21, 17–21ರಿಂದ ಸೋತರು.

ಗುರುವಾರ ಸಿಂಧು ಪಂದ್ಯ: ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ ಪಿ.ವಿ.ಸಿಂಧು ಗುರುವಾರ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಅವರಿಗೆ ಚೀನಾದ ಗೋ ಫಂಜಿ ಸವಾಲೊಡ್ಡಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕಾ ಅವರನ್ನು ಎದುರಿಸುವರು.

ಹಾಂಕಾಂಗ್‌ನ ವಾಂಗ್ ವಿಂಗ್ ಕೀ ವಿನ್ಸೆಂಟ್ ಅವರನ್ನು ಕಿದಂಬಿ ಶ್ರೀಕಾಂತ್ ಎದುರಿಸುವರು. ಏಷ್ಯನ್‌ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಅವರನ್ನು ವಿನ್ಸೆಂಟ್ ಮಣಿಸಿದ್ದರು. ಹೀಗಾಗಿ ಶ್ರೀಕಾಂತ್ ಅವರಿಗೆ ಈಗ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಮಲೇಷ್ಯಾದ ಚಾಂಗ್ ಪೆಂಗ್ ಸೂನ್‌ ಮತ್ತು ಗೋಹ್‌ ಲ್ಯು ಯಿಂಗ್ ಅವರ ಸವಾಲನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT