ಹಾಂಗ್‌ಝೌ (ಪಿಟಿಐ): ಭಾರತದ ಪ್ರಮುಖ ವೇಟ್‌ಲೀಫ್ಟರ್ ಮೀರಾಬಾಯಿ ಚಾನು ಏಷ್ಯನ್ ಕ್ರೀಡಾಕೂಟದಲ್ಲಿ ನಿರಾಸೆ ಅನುಭವಿಸಿದರು.
ತೊಡೆಯ ಸ್ನಾಯುಸೆಳೆತದಿಂದ ಬಳಲಿದ ಅವರು 49 ಕೆಜಿ ವಿಭಾಗದಲ್ಲಿ ವೈಫಲ್ಯ ಅನುಭವಿಸಿದರು. ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮೀರಾಬಾಯಿ ಅವರು ಇಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದರು.
ಆದರೆ ಶನಿವಾರ ನಡೆದ ಸ್ಪರ್ಧೆಯ ಆರಂಭದಲ್ಲಿಯೇ ಅವರು ನೋವು ಅನುಭವಿಸಿದರು. ಇದರಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೀರಾಬಾಯಿ ಅವರಿಗೆ ಕೋಚ್ ಸೂಚಿಸಿದರು. ಆದರೂ ಅವರು ಹಿಂದೆ ಜಗ್ಗಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದರು. ನಾಲ್ಕನೇ ಸ್ಥಾನ ಪಡೆದರು.
‘ಸ್ನಾಚ್ ಸ್ಪರ್ಧೆಗೂ ಮುನ್ನ ಅಭ್ಯಾಸ ಮಾಡುವ ಸಂದರ್ಭದಲ್ಲಿ ತೊಡೆಯ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿತು. ದಪ್ಪನೆಯ ಕವಚವು ಬಡಿದಿದ್ದರಿಂದ ಈ ನೋವು ಕಾಣಿಸಿಕೊಂಡಿರಬೇಕು. ವೈದ್ಯಕೀಯ ಸಿಬ್ಬಂದಿಯು ಐಸ್ ಮತ್ತು ನೋವು ನಿವಾರಕ ಸಿಂಪಡಿಸಿ ಪ್ರಥಮ ಚಿಕಿತ್ಸೆ ನೀಡಿದರು. ನಾವು ಭಾರತದಲ್ಲಿ ಯಾವ ರೀತಿಯ ಚಿಕಿತ್ಸೆ ಪದ್ಧತಿ ನೀಡುತ್ತೇವೆ ನೋಡಿ. ಈಗಲೂ ನನಗೆ ನೋವು ಇದೆ‘ ಎಂದು ಚಾನು ಸ್ಪರ್ಧೆಯ ನಂತರ ಹೇಳಿದರು.
‘ತೊಡೆಯ ಬಲಭಾಗದ ಎಲುವಿನಲ್ಲಿ ನೋವು ಇದೆ‘ ಎಂದೂ ಹೇಳಿದರು.
2014ರ ಏಷ್ಯನ್ ಕೂಟದಲ್ಲಿ ಅವರು ಒಂಬತ್ತನೇ ಸ್ಥಾನ ಗಳಿಸಿದ್ದರು. 2018ರಲ್ಲಿ ಬೆನ್ನಿನ ಗಾಯದಿಂದ ಹೊರಗುಳಿದಿದ್ದರು. ಮೀರಾ ಅವರ ಖಾತೆಯಲ್ಲಿ ಬಹುತೇಕ ಪ್ರತಿಷ್ಠಿತ ಸ್ಪರ್ಧೆಗಳ ಪದಕಗಳು ಇವೆ. ಆದರೆ ಏಷ್ಯನ್ ಕ್ರೀಡಾಕೂಟದ ಪದಕ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.