ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ನೀನಾ ವೆಂಕಟೇಶ್ ಅವರು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು ಮಹಿಳೆಯರ 50 ಮೀ. ಬಟರ್‌ಫೈ ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಉತ್ತಮಪಡಿಸುವ ಜತೆಗೆ ಚಿನ್ನದ ಸಾಧನೆ ಮಾಡಿದರು.
ಕರ್ನಾಟಕದ ಈಜುಪಟುಗಳು ಗುರುವಾರವೂ ಪದಕ ಬೇಟೆ ಮುಂದುವರಿಸಿದ್ದಾರೆ. ಶ್ರೀಹರಿ ಅವರು 55.59 ಸೆಕೆಂಡ್‌ನಲ್ಲಿ ಗುರಿ ತಲುಪಿ 2022ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ (55.80 ಸೆ) ದಾಖಲೆಯನ್ನು ಸರಿಸಿದರು. ಮಹಾರಾಷ್ಟ್ರದ ರಿಷಭ್ ದಾಸ್ (57.37ಸೆ), ಕರ್ನಾಟಕದ ಎಸ್. ಶಿವ (57.41) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ನೀನಾ ವೆಂಕಟೇಶ್ ಅವರು 27.70 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಕಳೆದ ವರ್ಷದ ಕೂಟದಲ್ಲಿ ತಾವೇ ಸ್ಥಾಪಿಸಿದ್ದ (28.39 ಸೆ) ದಾಖಲೆಯನ್ನು ಮೀರಿ ನಿಂತರು. ಕರ್ನಾಟಕದ ಮಾನವಿ ವರ್ಮಾ (27.90ಸೆ) ಬೆಳ್ಳಿ ಪದಕ ಗೆದ್ದರೆ, ಮಹಾರಾಷ್ಟ್ರದ ರುಜುತಾ ಖಾಡೆ (28.38 ಸೆ) ಕಂಚು ಪಡೆದರು.
ಮಹಿಳೆಯರ 1500 ಮೀ ಫ್ರೀಸ್ಟೈಲ್‌ನಲ್ಲಿ ದೆಹಲಿಯ ಭವ್ಯಾ ಸಚ್‌ದೇವಾ (17ನಿ.40.82ಸೆ) ಅವರು ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2015ರ ಕೂಟದಲ್ಲಿ ಮಹಾರಾಷ್ಟ್ರದ ಆಕಾಂಕ್ಷಾ ವೋರಾ (17ನಿ.42.44 ಸೆ) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ತೆಲಂಗಾಣದ ವೃತ್ತಿ ಅಗರ್‌ವಾಲ್ ಮತ್ತು ಕರ್ನಾಟಕ ಶಿರಿನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಪುರುಷರ 800 ಫ್ರೀಸ್ಟೈಲ್‌ನಲ್ಲಿ ದೆಹಲಿಯ ಕುಶಾಗ್ರ ರಾವತ್ (8 ನಿ.07.43) ಕೂಟ ದಾಖಲೆಯ ಜತೆಗೆ ಚಿನ್ನದ ಸಾಧನೆ ಮಾಡಿದರು. ಕಳೆದ ವರ್ಷದ ಕೂಟದಲ್ಲಿ ಮಧ್ಯಪ್ರದೇಶದ ಅದೈತ್ ಪೇಜ್ (8 ನಿ. 12.24 ಸೆ) ನಿರ್ಮಿಸಿದ್ದ ದಾಖಲೆಯನ್ನು ಸರಿಸಿದರು. ಕೇರಳದ ಸಾಜನ್ ಪ್ರಕಾಶ್, ಅದೈತ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಕರ್ನಾಟಕದ ಅನೀಸ್ ಎಸ್. ಗೌಡ ನಾಲ್ಕನೇ ಸ್ಥಾನ ಗಳಿಸಿದರು.
ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಮಹಾರಾಷ್ಟ್ರದ ಪಾಲಕ್ ಜೋಷಿ (1ನಿ.05.29ಸೆ) ಚಿನ್ನ ಗೆದ್ದರೆ, ಗೋವಾದ ಸಂಜನಾ ಮುರುಗೇಶ್ ಬೆಳ್ಳಿ ಮತ್ತು ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್ ಕಂಚಿನ ಪದಕ ಗೆದ್ದರು.
ಪುರುಷರ 50 ಮೀ ಬಟರ್‌ಫೈನಲ್ಲಿ ಮಹಾರಾಷ್ಟ್ರದ ವೃಂದಾವಲ್ ಖಡೆ (24.60ಸೆ) ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. 2015ರಲ್ಲಿ ತಾವೇ ನಿರ್ಮಿಸಿದ (24.73 ಸೆ) ದಾಖಲೆಯನ್ನು ಉತ್ತಮಪಡಿಸಿಕೊಂಡರು. ಅದೇ ರಾಜ್ಯದ ಮಹಿತ್ ಅಂಬ್ರೆ, ಕೇರಳದ ಸಾಜನ್ ಪ್ರಕಾಶ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
Cut-off box - ಟಿಟಿ: ಅರ್ಚನಾಗೆ ಚಿನ್ನ ಕರ್ನಾಟಕದ ಅರ್ಚನಾ ಕಾಮತ್ ಅವರು ರಾಷ್ಟ್ರೀಯ ಕ್ರೀಡಾಕೂಟದ ಟೇಬಲ್ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಅವರು ಫೈನಲ್‌ನಲ್ಲಿ ಮಹಾರಾಷ್ಟ್ರದ ದಿಯಾ ಚಿತಾಲೆ ಅವರನ್ನು 11-4 11-7 11-6 7-11 12-10 ರಿಂದ ಮಣಿಸಿ ಚಾಂಪಿಯನ್ ಆದರು. ಸೆಮಿಫೈನಲ್‌ನಲ್ಲಿ ಅವರು ದೆಹಲಿಯ ಲಕ್ಷಿತಾ ನಾರಂಗ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಪಶ್ಚಿಮ ಬಂಗಾಲದ ಮೌಮಾ ದಾಸ್ ಅವರನ್ನು ಸೋಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.