ಪ್ಯಾರಿಸ್: ನಗರದ ಮಧ್ಯದಲ್ಲಿ ಹರಿಯುತ್ತಿರುವ ಸೆನ್ ನದಿಯಲ್ಲಿ ನೀರಿನ ಮಟ್ಟ ಇನ್ನೂ ಶುಭ್ರಗೊಂಡಿಲ್ಲ. ಇದರ ಮಧ್ಯೆಯೇ ಮಿಶ್ರ ಟ್ರಯಥ್ಲಾನ್ ಸ್ಪರ್ಧಿಗಳು ನದಿಯಲ್ಲಿ ಈಜಿದರು.
ನದಿಯನ್ನು ಸ್ವಚ್ಛಗೊಳಿಸಿ, ಕೊಳಚೆ ನೀರು ಸೇರದಂತೆ ತಡೆಯಲು ಸಂಸ್ಕರಣಾ ಘಟಕ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಫ್ರಾನ್ಸ್ ಅಧಿಕಾರಿಗಳು ₹1,300 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ.
ಮಹಿಳಾ ವಿಭಾಗದ ಟ್ರಯಥ್ಲಾನ್ ಪೂರ್ಣಗೊಂಡಿದೆ. ಆದರೆ ಈ ಸ್ಪರ್ಧೆಗೆ ಮೊದಲು ಈಜು ಹಂತಕ್ಕೆ ಸಜ್ಜಾಗಲು ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ನಿಗದಿ ಮಾಡಿದ್ದ ತರಬೇತಿ ಅವಧಿಯನ್ನು ನದಿಯ ನೀರು ಈಜಲು ಯೋಗ್ಯವಿಲ್ಲದ ಕಾರಣ ರದ್ದುಗೊಳಿಸಲಾಗಿತ್ತು. ಬ್ಯಾಕ್ಟೀರಿಯಾ ಮಟ್ಟ ಕಡಿಮೆಯಾಗದಿರುವುದು ಆಯೋಜಕರ ನಿದ್ದೆಗೆಡಿಸಿದೆ.
‘ಅಧಿಕಾರಿಗಳು ಇನ್ನೂ ಹೆಚ್ಚು ವೆಚ್ಚ ಮಾಡಿ ನೀರನ್ನು ಸ್ವಚ್ಛಗೊಳಿಸಬೇಕಾಗಿತ್ತು. ಈಗ ಅವರು ಎಲ್ಲವೂ ಸುಖಾಂತ್ಯವಾಗುವ ವಿಶ್ವಾಸದಲ್ಲಿದ್ದಾರೆ. ಇದು ಒಲಿಂಪಿಕ್ಸ್ ಆಗಿರುವ ಕಾರಣ ಅಥ್ಲೀಟುಗಳಿಗೂ ಸ್ಪರ್ಧೆ ಬೇಕಾಗಿದೆ’ ಎಂದು ಅಮೆರಿಕದ ತಂಡದ ಭಾಗವಾಗಿರುವ ಮೋರ್ಗನ್ ಪಿಯರ್ಸ್ನ್ ಹೇಳಿದರು.
ಹಿಂದೆಸರಿದ ಬೆಲ್ಜಿಯಂ ತಂಡ:
ಬೆಲ್ಜಿಯಂ ಟ್ರಯಥ್ಲಾನ್ ಮಿಶ್ರ ರಿಲೆ ತಂಡದ ಈಜುಗಾರ್ತಿ ಕ್ಲೇರ್ ಮೈಕೆಲ್ ಅನಾರೋಗ್ಯದಿಂದ ಹಿಂದೆಸರಿದ ಕಾರಣ ಬೆಲ್ಜಿಯಂ ತಂಡ ಸ್ಪರ್ಧೆಯಿಂದ ಹಿಂದೆಸರಿದಿದೆ. ಅವರು ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ಟ್ರಯಥ್ಲಾನ್ ವೇಳೆ ನದಿಯಲ್ಲಿ ಈಜಿದ್ದರು. ನಂತರ ಅಸ್ವಸ್ಥರಾಗಿದ್ದರು.
ತಂಡ 38ನೇ ಸ್ಥಾನ ಪಡೆದಿತ್ತು. 35 ವರ್ಷ ವಯಸ್ಸಿನ ಕ್ಲೇರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಅವರು ಭಾನುವಾರ ಕ್ರೀಡಾಗ್ರಾಮಕ್ಕೆ ಮರಳಿದ್ದಾರೆ.
ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಗಳು ಮೊದಲು 1,500 ಮೀ. ಈಜಬೇಕಾಗುತ್ತದೆ. ನಂತರ 40 ಕಿ.ಮೀ. ಸೈಕ್ಲಿಂಗ್, ಕೊನೆಯಲ್ಲಿ 10 ಕಿ.ಮೀ. ಓಡಬೇಕಾಗುತ್ತದೆ.
ಕ್ಲಾರಾ ಅನಾರೋಗ್ಯಕ್ಕೆ ನದಿಯಲು ಕಲುಷಿತಗೊಂಡಿದ್ದು ಕಾರಣವೇ ಎಂಬ ಬಗ್ಗೆ ತಂಡ ಏನೂ ಹೇಳಿಲ್ಲ.