ಪ್ಯಾರಿಸ್: ‘ಪ್ರಣಯ ನಗರಿ’ ಪ್ಯಾರಿಸ್‌ನಲ್ಲಿ ಈಗ ಮತ್ತೆ ಕ್ರೀಡಾ ಹಬ್ಬದ ವಾತಾವರಣ ಗರಿಗೆದರಿತು. ಬುಧವಾರ ರಾತ್ರಿ ಪ್ಯಾರಾಲಿಂಪಿಕ್ಸ್‌ಗೆ ರಂಗುರಂಗಿನ ಚಾಲನೆ ದೊರೆಯಿತು.
17 ದಿನಗಳ ಹಿಂದಷ್ಟೇ ಒಲಿಂಪಿಕ್ಸ್ ಮುಕ್ತಾಯಗೊಂಡಿತ್ತು. ಪ್ಲೇಸ್ ಡಿ ಲಾ ಕಾಂಕಾರ್ಡ್ ನಲ್ಲಿ ಕೂಟವು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಕಾಲ್ಡ್ರನ್‌ನಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಕೂಟಕ್ಕೆ ಚಾಲನೆ ದೊರೆಯಿತು. ಗುರುವಾರದಿಂದ ಕ್ರೀಡೆಗಳು ಆರಂಭವಾಗಲಿವೆ. ಈಚೆಗೆ ಒಲಿಂಪಿಕ್ ಕೂಟದ ಸ್ಪರ್ಧೆಗಳು ನಡೆದ ತಾಣಗಳಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡೆಗಳೂ ನಡೆಯಲಿವೆ. ಒಲಿಂಪಿಕ್ಸ್ ನಡೆದಿದ್ದ 35 ತಾಣಗಳಲ್ಲಿ 18ರಲ್ಲಿ ಸ್ಪರ್ಧೆಗಳು ಆಯೋಜನೆಗೊಳ್ಳಲಿವೆ. ಸೆಪ್ಟೆಂಬರ್ 8ರಂದು ಕೂಟವು ಮುಕ್ತಾಯವಾಗಲಿದೆ.
ಪ್ಯಾರಾಲಿಂಪಿಕ್ಸ್ ಜ್ಯೋತಿಯನ್ನು ಮೊದಲಿಗೆ ಇಂಗ್ಲೆಂಡ್‌ನ ಸ್ಟೋಕ್ ಮ್ಯಾನೆವೆಲ್ ಆಸ್ಪತ್ರೆಯಲ್ಲಿ ಬೆಳಗ ಲಾಯಿತು. ಇದೇ ಸ್ಥಳದಲ್ಲಿ ಪ್ಯಾರಾಲಿಂಪಿಕ್ಸ್ ಮೊದಲ ಬಾರಿ ನಡೆದಿತ್ತು. ಬಲಾಢ್ಯ ತಂಡವಾದ ಚೀನಾ, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ (2020) 96 ಚಿನ್ನದ ಪದಕ ಮತ್ತು ಬ್ರಿಟನ್ 41 ಚಿನ್ನದ ಪದಕಗಳನ್ನು ಗೆದ್ದಿದ್ದವು.
ಒಟ್ಟು 20 ಲಕ್ಷ ಟಿಕೆಟ್‌ಗಳ ಮಾರಾಟ: ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ವೀಕ್ಷಿಸಲು 20 ಲಕ್ಷ ಮಂದಿ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು
ಆಯೋಜಕರು ತಿಳಿಸಿದ್ದಾರೆ.
‘ಕಳೆದ ಒಂದು ತಿಂಗಳಲ್ಲಿ ಮಾರಾಟವಾದ 10 ಲಕ್ಷ ಟಿಕೆಟ್ ಸೇರಿದಂತೆ ಈವರೆಗೆ 20 ಲಕ್ಷ ಟಿಕೆಟ್‌ಗಳನ್ನು ಜನ ಕಾಯ್ದಿರಿಸಿದ್ದಾರೆ. ಇನ್ನೂ 5 ಲಕ್ಷ ಟಿಕೆಟ್‌ಗಳು ಲಭ್ಯ ಇವೆ’ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.