ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್‌ಗೆ ಪ್ಯಾರಿಸ್‌ ಸಜ್ಜು l ದಾಖಲೆ ಪದಕಗಳ ನಿರೀಕ್ಷೆಯಲ್ಲಿ ಭಾರತ

ಪ್ಯಾರಾ ಕ್ರೀಡಾಪಟುಗಳ ಹಬ್ಬಕ್ಕೆ ಬೆಳಕಿನ ನಗರಿ ಪ್ಯಾರಿಸ್‌ ಸಜ್ಜು l ಭಾರತದ 84 ಮಂದಿ ಕಣಕ್ಕೆ
Published 27 ಆಗಸ್ಟ್ 2024, 23:30 IST
Last Updated 27 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಪ್ಯಾರಾ ಕ್ರೀಡಾಪಟುಗಳ ವಿಶ್ವದ ಅತಿ ದೊಡ್ಡ ಹಬ್ಬಕ್ಕೆ ಫ್ರಾನ್ಸ್‌ನ ರಾಜಧಾನಿ ಸಜ್ಜಾಗಿದೆ. ಪ್ಯಾರಿಸ್‌ನಲ್ಲಿ ಬುಧವಾರ ಆರಂಭವಾಗುವ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತದ 84 ಮಂದಿ ಪದಕದ ಕನಸಿನೊಂದಿಗೆ ಸ್ಪರ್ಧಾಕಣಕ್ಕೆ ಇಳಿಯಲು ತಯಾರಾಗಿದ್ದಾರೆ. 

ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತದಿಂದ ಹಿಂದೆಂದೂ ಇಷ್ಟೊಂದು ಸಂಖ್ಯೆಯ ಕ್ರೀಡಾಪಟುಗಳು ಭಾಗವ ಹಿಸಿರಲಿಲ್ಲ. ಯುವ ಅಥ್ಲೀಟ್‌ಗಳೊಂದಿಗೆ ಅನುಭವಿಗಳ ಸಮ್ಮಿಶ್ರಣದ ತಂಡವು ‘ಬೆಳಕಿನ ನಗರಿ’ಯಲ್ಲಿ ಪದಕ ಗಳಿಕೆಯಲ್ಲಿ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದೆ.

2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ಐದು ಚಿನ್ನ ಸೇರಿದಂತೆ 19 ಪದಕಗಳನ್ನು ಗೆದ್ದಿತ್ತು. ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿತ್ತು. ಇದು ಭಾರತದ ಈವರೆಗಿನ ಸರ್ವಶ್ರೇಷ್ಠ ಸಾಧನೆಯಾಗಿದೆ. ಆದರೆ, ಈ ಬಾರಿ 25 ಪದಕಗಳ ಗುರಿಯನ್ನು ಭಾರತ ಹೊಂದಿದೆ. ಅದರಲ್ಲಿ ಎರಡಂಕಿ ಸಂಖ್ಯೆಯ ಚಿನ್ನದ ಪದಕ ವಿಶ್ವಾಸವನ್ನು ಹೊಂದಲಾಗಿದೆ.

ಏಷ್ಯನ್‌ ಕ್ರೀಡಾಕೂಟ ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ಯಾರಾ ಕ್ರೀಡಾಪಟುಗಳ ಅಸಾಧಾರಣ ಪ್ರದರ್ಶನವು ಸಹಜವಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಚೀನಾದ ಹಾಂಗ್‌ಝೌನಲ್ಲಿ ಕಳೆದ ವರ್ಷ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು 29 ಚಿನ್ನ ಸೇರಿದಂತೆ ದಾಖಲೆಯ 111 ಪದಕಗಳನ್ನು ಗೆದ್ದಿತ್ತು. ಮೇ ತಿಂಗಳಿನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿ ಯನ್‌ಷಿಪ್‌ನಲ್ಲಿ ಅರ್ಧ ಡಜನ್ ಚಿನ್ನ ಸೇರಿದಂತೆ 17 ಪದಕಗಳನ್ನು ಗಳಿಸಿ, ಒಟ್ಟಾರೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತ್ತು.

ಜಾವೆಲಿನ್ ಥ್ರೋನಲ್ಲಿ ವಿಶ್ವದಾಖಲೆ ಹೊಂದಿರುವ ಸುಮಿತ್ ಅಂಟಿಲ್ (ಎಫ್‌64) ಮತ್ತು ರೈಫಲ್ ಶೂಟರ್ ಅವನಿ ಲೇಖರಾ (10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌1) ಅವರಂತಹ ತಾರೆಗಳನ್ನು ಸೇರಿದಂತೆ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಿಜೇತರು ಪ್ಯಾರಾಲಿಂಪಿಕ್ಸ್ ತಂಡದಲ್ಲಿದ್ದಾರೆ. ಶೀತಲ್ ದೇವಿ (ಪ್ಯಾರಾ ಆರ್ಚರಿ), ಹೊಕಾಟೊ ಸೆಮಾ (ಶಾಟ್‌ಪಟ್‌) ಮತ್ತು ನಾರಾಯಣ ಕೊಂಗನಪಲ್ಲೆ (ರೋವರ್) ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.

ಭಾರತವು ಈ ಬಾರಿ ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದೆ. ಟೋಕಿಯೊದಲ್ಲಿ 54 ಸದಸ್ಯರ ತಂಡವು ಒಂಬತ್ತು ಕ್ರೀಡೆಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಟೋಕಿಯೊದಲ್ಲಿ ಚಿನ್ನ ಗೆದ್ದ ಶೂಟರ್ ಮನೀಶ್ ನರ್ವಾಲ್ ಮತ್ತು ಬ್ಯಾಡ್ಮಿಂಟನ್‌ ತಾರೆ ಕೃಷ್ಣಾ ನಗಾರ್ ಕೂಡ ತಂಡದಲ್ಲಿದ್ದು, ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ.

17 ವರ್ಷದವನಾಗಿದ್ದಾಗ ಅಪಘಾತಕ್ಕೀಡಾಗಿ ಎಡಗಾಲು ತುಂಡಾಗಿದ್ದ 26 ವರ್ಷ ವಯಸ್ಸಿನ ಅಂಟಿಲ್ ಟೋಕಿಯೊದಲ್ಲಿ ಮತ್ತು ಹಾಂಗ್‌ಝೌನಲ್ಲಿ ಚಾಂಪಿಯನ್‌ ಆಗಿದ್ದರು. ಅಲ್ಲದೆ, ಕಳೆದ ಮೇನಲ್ಲಿ ನಡೆದ ಪ್ಯಾರಾ ವಿಶ್ವ ಚಾಂಪಿಯನ್‌ ಷಿಪ್‌ನಲ್ಲೂ ಚಿನ್ನ ಗೆದ್ದಿದ್ದರು. 73.29 ಮೀಟರ್‌ ದೂರ ಜಾವೆಲಿನ್‌ ಎಸೆದು ವಿಶ್ವದಾಖಲೆ ಹೊಂದಿರುವ ಅವರು ಟೂರ್ನಿಯಲ್ಲಿ 75 ಮೀಟರ್‌ ಗುರಿಯನ್ನು ದಾಟುವ ಪ್ರಯತ್ನದಲ್ಲಿದ್ದಾರೆ.

ಟೋಕಿಯೊದಲ್ಲಿ ಒಂದು ಚಿನ್ನ ಮತ್ತು ಕಂಚಿನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದ 22 ವರ್ಷ ವಯಸ್ಸಿನ ಶೂಟರ್‌ ಲೇಖರಾ ಈ ಬಾರಿಯೂ ನಿಖರ ಗುರಿಯಿಡುವ ಛಲದಲ್ಲಿದ್ದಾರೆ. ಪ್ಯಾರಾಲಿಂಪಿಕ್ಸ್‌ನ ಒಂದೇ ಕೂಟದಲ್ಲಿ ಜೋಡಿ ಪದಕಗಳನ್ನು ಗೆದ್ದ ಮೊದಲ ಭಾರತದ ಮಹಿಳೆ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು.

ಫೆಬ್ರುವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿ ಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ  ಕೃಷ್ಣಾ ನಗರ್ (ಪುರುಷರ ಸಿಂಗಲ್ಸ್ ಎಸ್‌ಎಚ್ 6), ಟೋಕಿಯೊದಲ್ಲಿ ಬೆಳ್ಳಿ ಗೆದ್ದ
ಬ್ಯಾಡ್ಮಿಂಟನ್‌ಪಟು, ಕನ್ನಡಿಗ ಸುಹಾಸ್ ಯತಿರಾಜ್ (ಪುರುಷರ ಸಿಂಗಲ್ಸ್ ಎಸ್‌ಎಲ್ 4 ಮತ್ತು ಮಿಶ್ರ ಡಬಲ್ಸ್ ಎಸ್‌ಎಲ್ 3-ಎಸ್‌ಯು5) ಅವರೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಕೈಗಳಿಲ್ಲದೆ ಕಾಲುಗಳಲ್ಲಿ ಬಿಲ್ಲುಗಳನ್ನು ಪ್ರಯೋಗ ಮಾಡುವ 17 ವರ್ಷ ವಯಸ್ಸಿನ ಪ್ಯಾರಾ ಆರ್ಚರಿಪಟು ಶೀತಲ್ ಅವರು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆ ಮೂರು ಪದಕಗಳನ್ನು ಗೆದ್ದಿದ್ದರು. ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆದ್ದರೆ, ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಅವರ ಮೇಲೆಯೂ ನಿರೀಕ್ಷೆಯ ಭಾರ ಹೆಚ್ಚಿದೆ.

ಧ್ವಜಧಾರಿಗಳು: ಬುಧವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸುಮಿತ್‌ ಅಂಟಿಲ್‌ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟದ ಎಫ್‌34 ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾಟ್‌ಪುಟ್ ಅಥ್ಲೀಟ್‌ ಭಾಗ್ಯಶ್ರೀ ಜಾಧವ್ ಭಾರತದ ಧ್ವಜಧಾರಿ ಯಾಗಲಿದ್ದಾರೆ. ಸೆಪ್ಟೆಂಬರ್ 8ರಂದು ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ ಸಮಾರೋಪ ನಡೆಯಲಿದೆ.

549 ಪದಕಗಳಿಗೆ ಸ್ಪರ್ಧೆ: 11 ದಿನ ನಡೆಯುವ ಪ್ಯಾರಾಲಿಂಪಿಕ್ಸ್‌ನಲ್ಲಿ 169 ದೇಶಗಳಿಂದ 4400ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 22 ಕ್ರೀಡೆಗಳಲ್ಲಿ ಒಟ್ಟು 549 ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ.ಸ್ಕ್ವಾರ್‌ ಪ್ಲೇಸ್ ಡೆ ಲಾ ಕಾಂಕ್ರೇರ್ಡ್‌ ನಲ್ಲಿ ಉದ್ಘಾಟನಾ ಸಮಾರಂಭ
ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT