ಪ್ಯಾರಿಸ್: ಒಲಿಂಪಿಕ್ ಕೂಟದ ಬ್ಯಾಡ್ಮಿಂಟನ್‌ನಲ್ಲಿ ಪುರುಷರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ ಲಕ್ಷ್ಯ ಸೇನ್ ಅವರು ಭಾನುವಾರ ಹಾಲಿ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಎದುರಿಸಲಿದ್ದಾರೆ.
ಶುಕ್ರವಾರ ನಡೆದಿದ್ದ ರೋಚಕ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ ಅವರು ಚೀನಾ ತೈಪೆಯ ಚೌ ಟೀನ್ ಚೆನ್ ವಿರುದ್ಧ ಜಯಿಸಿದ್ದರು. 22 ವರ್ಷದ ಲಕ್ಷ್ಯ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್. ಆದರೆ ವಿಕ್ಟರ್ ಅನುಭವಿಯಾಗಿದ್ದಾರೆ. ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಟೋಕಿಯೊದಲ್ಲಿ ಚಿನ್ನ ಜಯಿಸಿದ್ದರು. ಎರಡು ಸಲ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.
ಲಕ್ಷ್ಯ ಅವರು ಬೆಂಗಳೂರಿನ ಪ್ರಕಾಶ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ ಪಡುಕೋಣೆ ಮತ್ತು ವಿಮಲ್‌ಕುಮಾರ್ ಅವರು ಲಕ್ಷ್ಯಗೆ ಕೋಚ್ ಆಗಿದ್ದಾರೆ.