ಪ್ಯಾರಿಸ್: ಸೇಂಟ್ ಲೂಸಿಯಾದ ಉದಯೋನ್ಮುಖ ತಾರೆ ಜೂಲಿಯನ್ ಆಲ್ಪ್ರೆಡ್ ಒಲಿಂಪಿಕ್ಸ್‌ನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು.
ಈ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಫೆವರಿಟ್ ಆಗಿದ್ದ ಅಮೆರಿಕದ ಶಕ್ಯಾರಿ ರಿಚರ್ಡ್‌ಸನ್ ಅವರನ್ನು ಹಿಂದಿಕ್ಕಿದ ಜೂಲಿಯನ್ ಅಚ್ಚರಿ ಮೂಡಿಸಿದರು. ಶನಿವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದ ಫೈನಲ್‌ನಲ್ಲಿ 23 ವರ್ಷ ವಯಸ್ಸಿನ ಜೂಲಿಯಾನ್ 10.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಈ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಜಯಿಸಿದ ಕೆರೀಬಿಯನ್ ದ್ವೀಪದ ಮಹಿಳೆಯೆಂಬ ಹೆಗ್ಗಳಿಕೆಯೂ ಅವರದ್ದಾಯಿತು.
ಇದಕ್ಕೂ ಮುನ್ನ ಯಾವುದೇ ಹೊರಾಂಗಣದ ಕೂಟಗಳಲ್ಲಿ ಅವರು ಪ್ರಥಮ ಸ್ಥಾನ ಗಳಿಸಿರಲಿಲ್ಲ. ಆದರೆ ಈ ಕೂಟದಲ್ಲಿ ತಮ್ಮ ಸಾಮರ್ಥ್ಯ ಮೆರೆದರು. ಮಿಂಚಿನ ವೇಗದಲ್ಲಿ ಓಡಿ ಘಟಾನುಘಟಿಗಳಿಗೆ ಆಘಾತ ನೀಡಿದರು.
ಶಕ್ಯಾರಿ (10.87ಸೆ) ಮತ್ತು ಮೆಲಿಸಾ ಜೆಫರ್ಸನ್ (10.92ಸೆ) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.
ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಜಮೈಕಾದ ಶೆಲಿ ಆ್ಯನ್ ಫ್ರೆಸರ್ ಅವರು ಸೆಮಿಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದರು.