ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics 2024 | ಪದಕಗಳು ಆರು; ಭವಿಷ್ಯದ ನಿರೀಕ್ಷೆಗಳು ಹತ್ತಾರು

Published : 12 ಆಗಸ್ಟ್ 2024, 0:05 IST
Last Updated : 12 ಆಗಸ್ಟ್ 2024, 0:05 IST
ಫಾಲೋ ಮಾಡಿ
Comments

ಪ್ಯಾರಿಸ್: ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಏಳು ಪದಕ ಜಯಿಸಿದ್ದ ಭಾರತ ಅಮೋಘ ಸಾಧನೆ ಮಾಡಿತ್ತು. ಈ ಸಲ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ದೊಡ್ಡ ತಂಡವನ್ನು ಈ ಬಾರಿ ಭಾಗವಹಿಸಿತ್ತು. ಅದರಿಂದಾಗಿ ಸಹಜವಾಗಿಯೇ ಪದಕಗಳ ಸಂಖ್ಯೆ ಎರಡಂಕಿ ದಾಟುವ ಕನಸು ಗರಿಗೆದರಿತ್ತು. 

ಆದರೆ ಅಂತಿಮವಾಗಿ ಭಾರತ ತಂಡವು ಆರು ಪದಕಗಳನ್ನು ಗೆದ್ದು ಅಭಿಯಾನ ಮುಗಿಸಿದೆ. ಅಪಾರ ನಿರೀಕ್ಷೆ ಮೂಡಿಸಿದ ಕೆಲವರು ನಿರಾಶೆ ಮೂಡಿಸಿದರು.  ಇನ್ನು ಕೆಲವರು ಭರವಸೆ ಉಳಿಸಿಕೊಂಡರು. ಕೆಲವು ಕ್ರೀಡೆಗಳಲ್ಲಿ ‘ಕೈಗೆ ಬಂದ ಪದಕ ಕೊರಳು ಅಲಂಕರಿಸಲಿಲ್ಲ‘ ಎಂಬಂತಾಯಿತು. ಈ ಹಾದಿಯಲ್ಲಿ ಒಂದಿಷ್ಟು ವಿವಾದಗಳೂ ಸದ್ದು ಮಾಡಿದವು. ಅವುಗಳ ವಿವರ ಇಲ್ಲಿವೆ; 

ನೀರಜ್ ಚೋಪ್ರಾ 

ದಶಕಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಗಮನ ಸೆಳೆದಿದ್ದು ಕಡಿಮೆ. ಆದರೆ ಈ ಬಾರಿ ಜಗದ ಕಣ್ಣು ಜಾವೆಲಿನ್ ಥ್ರೋ ಅಂಗಳದತ್ತ ನೆಟ್ಟಿತ್ತು. ಅದಕ್ಕೆ ಕಾರಣ ನೀರಜ್ ಚೋಪ್ರಾ.  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅವರ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಇಲ್ಲಿಯೂ ಚಿನ್ನ ಗಳಿಸುವ ಭರವಸೆ ಮೂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಹರಿಯಾಣದ ಹುಡುಗ ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯಷಿಪ್, ಡೈಮಂಡ್ ಲೀಗ್‌ಗಳಲ್ಲಿ ಪದಕ ಸಾಧನೆ ಮಾಡಿದ್ದರು. ತೊಡೆ ಸ್ನಾಯುವಿನ ನೋವಿನಲ್ಲಿಯೂ ಅವರು ಪ್ಯಾರಿಸ್‌ನಲ್ಲಿ ಕಣಕ್ಕಿಳಿದರು. 

ಆದರೆ 89.45 ಮೀ ದೂರ ಥ್ರೋ ದಾಖಲಿಸಿದ ಅವರು ಬೆಳ್ಳಿ ಜಯಿಸಿದರು. ಅವರ ಸ್ನೇಹಿತ, ಪಾಕಿಸ್ತಾನದ ಅರ್ಷದ್ ನದೀಂ (92.97ಮಿ) ಚಿನ್ನ ಜಯಿಸಿದರು.  ಪಾಕ್ ಅಥ್ಲೀಟ್ ಟೋಕಿಯೊದಲ್ಲಿ ಪದಕ ಜಯಿಸಿರಲಿಲ್ಲ. 

ಮನು ಭಾಕರ್

ಟೋಕಿಯೊದಲ್ಲಿ ನಿರಾಶೆ ಅನುಭವಿಸಿದ್ದ ಶೂಟರ್ ಮನು ಭಾಕರ್ ಪ್ಯಾರಿಸ್‌ನಲ್ಲಿ ಗುರಿ ತಪ್ಪಲಿಲ್ಲ. 10 ಮೀ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಮತ್ತು ಮಿಶ್ರ ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದರು. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತೀಯ ಕ್ರೀಡಾಪಟುವೆಂಬ ದಾಖಲೆ ಮಾಡಿದರು.  25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಅತ್ಯಲ್ಪ ಅಂತರದಲ್ಲಿ ಪದಕವು ಅವರ ಕೈತಪ್ಪಿತು. ಇಲ್ಲದಿದ್ದರೆ ‘ಹ್ಯಾಟ್ರಿಕ್’ ಸಾಧನೆ ಅವರ ಸನಿಹದಲ್ಲಿಯೇ ಇತ್ತು. 

ಹಾಕಿ ಕಂಚು

ಭಾರತದ ಹಾಕಿ ತಂಡವು ಈ ಬಾರಿಯೂ ನಿರೀಕ್ಷೆ ಹುಸಿಗೊಳಿಸಲಿಲ್ಲ.  ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ 40 ವರ್ಷಗಳವರೆಗೆ ಭಾರತವು ಹಾಕಿಯಲ್ಲಿ ಒಂದೂ ಪದಕ ಜಯಿಸಿರಲಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನಪ್ರೀತ್ ಸಿಂಗ್ ಬಳಗವು ಕಂಚು ಗೆದ್ದಿತ್ತು. ಈ ಬಾರಿ ಹರ್ಮನ್‌ಪ್ರೀತ್ ಸಿಂಗ್ ಬಳಗವು ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿತು. ಅದರಲ್ಲೂ ಕ್ವಾರ್ಟರ್‌ಫೈನಲ್‌ನಲ್ಲಿ ಗ್ರೇಟ್‌ ಬ್ರಿಟನ್ ವಿರುದ್ಧ ಪಂದ್ಯದ ಬಹುತೇಕ ಭಾಗದಲ್ಲಿ 10 ಆಟಗಾರರೊಂದಿಗೆ (ಅಮಿತ್ ರೋಹಿದಾಸ್‌ಗೆ ರೆಡ್‌ ಕಾರ್ಡ್) ತಂಡವು ಆಡಿತ್ತು.  ಆದರೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು. ಇದರಿಂದಾಗಿ ಚಿನ್ನ ಅಥವಾ ಬೆಳ್ಳಿ ಪದಕ ಜಯಿಸುವ ಅವಕಾಶ ಕೈಜಾರಿತು. ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರ ಆಟವು ಅಮೋಘವಾಗಿತ್ತು. ಅವರು ಹಾಕಿ ಕ್ರೀಡೆಗೆ ವಿದಾಯ ಹೇಳಿದರು.

ಸ್ವಪ್ನಿಲ್ ಕುಸಳೆ

ಭಾರತಕ್ಕೆ ಈ ಸಲ ಒಲಿದ ಆರು ಪದಕಗಳ ಪೈಕಿ ಅಚ್ಚರಿ ಮೂಡಿಸಿದ್ದು ಸ್ವಪ್ನಿಲ್ ಕುಸಳೆ ಅವರು ಕಂಚು ಜಯಿಸಿತ್ತು. 50 ಮೀ ತ್ರೀ ಪೊಸಿಷನ್ ರೈಫಲ್‌ ವಿಭಾಗದಲ್ಲಿ ಅವರು ಗೆದ್ದರು. ಇದೇ ವಿಭಾಗದಲ್ಲಿದ್ದ ಐಶ್ವರಿ ಪ್ರತಾಪ್ ತೋಮರ್ ಅವರು ಪದಕ ಜಯಿಸುವ ಭರವಸೆ ಮೂಡಿಸಿತ್ತು. ಅವರು ವಿಫಲರಾದರು. ಆದರೆ ಮಹಾರಾಷ್ಟ್ರದ ಸ್ವಪ್ನಿಲ್ ಪದಕ ಜಯಿಸಿದರು. 

ಅಮನ್ ಸೆಹ್ರಾವತ್

ಕುಸ್ತಿ ಕಣದಲ್ಲಿ ಸಂತಸದ ತಂಗಾಳಿ ಬೀಸುವಂತೆ ಮಾಡಿದ್ದು ಅಮನ್ ಸೆಹ್ರಾವತ್. ಪುರುಷರ ವಿಭಾಗದಿಂದ ಭಾರತವನ್ನು ಪ್ರತಿನಿಧಿಸಿದ ಏಕೈಕ ಕುಸ್ತಿಪಟು ಅಮನ್. 21 ವರ್ಷದ ಯುವ ಪೈಲ್ವಾನ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿಯೇ ಕಂಚು ಗೆದ್ದರು. 11ನೇ ವಯಸ್ಸಿನಲ್ಲಿಯೇ ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥನಾಗಿದ್ದ ಹುಡುಗ ದೆಹಲಿಯ ಛತ್ರಸಾಲ ಅಖಾಡದಲ್ಲಿ ಕುಸ್ತಿಪಟುವಾಗಿ ಬೆಳೆದರು.  ಕಂಚಿನ ಪದಕದ ಪ್ಲೇಆಫ್‌ನಲ್ಲಿ ಅವರು ಪೋರ್ಟೊರಿಕೊದ ಡೇರಿಯನ್ ಟಾಯ್ ಕ್ರೂಜ್ ವಿರುದ್ಧ ಗೆದ್ದರು. 

ಕೈತಪ್ಪಿದ ಪದಕಗಳು

ಶೂಟಿಂಗ್‌ನಲ್ಲಿ ಮನು ಭಾಕರ್ 25 ಮೀಟರ್ಸ್ ಸ್ಪೋರ್ಟ್ಸ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಅವರ ಗುರಿ ಈಡೇರಲಿಲ್ಲ. ಶೂಟಿಂಗ್ ಕ್ರೀಡೆಯಲ್ಲಿಯೇ ಮಹೇಶ್ವರಿ ಚೌಹಾಣ್– ಅನಂತ್‌ಜೀತ್ ನರೂಕಾ (ಸ್ಕೀಟ್‌ ಮಿಶ್ರ ತಂಡ), ಅರ್ಜುನ್ ಬಬುತಾ (ಪುರುಷರ 10 ಮೀ. ರೈಫಲ್ ಶೂಟಿಂಗ್), ಲಕ್ಷ್ಯ ಸೇನ್ (ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್), ಅಂಕಿತಾ ಭಕತ್– ಧೀರಜ್ ಬೊಮ್ಮದೇವರ (ಆರ್ಚರಿ) ಹಾಗೂ ಮೀರಾಬಾಯಿ ಚಾನು (ಮಹಿಳೆಯರ ವೇಟ್‌ಲಿಫ್ಟಿಂಗ್‌) ಅವರು ನಾಲ್ಕನೇ ಸ್ಥಾನ ಪಡೆದರು. 

ವಿವಾದಗಳ ಸದ್ದು

ಭಾರತದ ಅಭಿಯಾನವು ವಿವಾದಗಳಿಲ್ಲದೇ ಅಂತ್ಯವಾಗಲು ಸಾಧ್ಯವೇ? 

ಪ್ರಮುಖವಾಗಿ ಈ ಬಾರಿ ಕುಸ್ತಿಪಟು ವಿನೇಶ್ ಫೋಗಟ್ ಅವರ ಅನರ್ಹತೆಯು ದೊಡ್ಡ ವಿವಾದಕ್ಕೆ ಕಾರಣವಾಯಿತು. ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿಯಲ್ಲಿ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಇದರಿಂದಾಗಿ ದೇಶಕ್ಕೆ ಚಿನ್ನ ಲಭಿಸುವ ಭರವಸೆ ಮೂಡಿತ್ತು. ಆದರೆ ಪಂದ್ಯಪೂರ್ವ ತೂಕಪರೀಕ್ಷೆಯಲ್ಲಿ ಅವರು 100 ಗ್ರಾಂ ಹೆಚ್ಚು ತೂಗಿದ್ದರಿಂದ ಅನರ್ಹಗೊಳಿಸಲಾಯಿತು. ಇದರಿಂದಾಗಿ ಭಾರತಕ್ಕೆ ಪದಕ ಕೈತಪ್ಪಿತು. ವಿನೇಶ್ ತಮ್ಮ ಕ್ರೀಡಾಜೀವನಕ್ಕೆ ನಿವೃತ್ತಿ ಘೋಷಿಸಿದರು. ಸೆಮಿಫೈನಲ್‌ ಜಯಿಸುವವರೆಗೂ ತಾವು ಅರ್ಹರಾಗಿದ್ದ ಕಾರಣ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಅವರು ಕ್ರೀಡಾ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. 

53 ಕೆ.ಜಿ. ವಿಭಾಗದ ಕುಸ್ತಿಪಟು ಅಂತಿಮ ಪಂಘಲ್ ಅವರು ಕ್ರೀಡಾಗ್ರಾಮ ಪ್ರವೇಶಕ್ಕೆ ತಮಗೆ ನೀಡಲಾಗಿದ್ದ ಮಾನ್ಯತೆಪತ್ರವನ್ನು ಸಹೋದರಿಗೆ ಕೊಟ್ಟಿದ್ದರು. ತಮ್ಮ ಕೋಣೆಯಲ್ಲಿದ್ದ ಕೆಲವು ಸಾಮಗ್ರಿಗಳನ್ನು ತಂದುಕೊಡಲು ಹೇಳಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.  24 ಗಂಟೆಯೊಳಗೆ ದೇಶ ತೊರೆಯುವಂತೆ ಸೂಚಿಸಲಾಯಿತು. ಅಂತಿಮ್ ತವರಿಗೆ ಮರಳಿದರು. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಎರಡು ಪದಕಗಳನ್ನು ಗೆದ್ದ ಮನು ಭಾಕರ್   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಎರಡು ಪದಕಗಳನ್ನು ಗೆದ್ದ ಮನು ಭಾಕರ್   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಭಾರತದ ಅಮನ್ ಸೆಹ್ರಾವತ್ ಮತ್ತು ಡೇರಿಯನ್ ಟಾಯ್ ಕ್ರೂಜ್ ಸೆಣಸಾಟ   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಭಾರತದ ಅಮನ್ ಸೆಹ್ರಾವತ್ ಮತ್ತು ಡೇರಿಯನ್ ಟಾಯ್ ಕ್ರೂಜ್ ಸೆಣಸಾಟ   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್ . ಶ್ರೀಜೇಶ್ ಅವರೊಂದಿಗೆ ತಂಡದ ಕೋಚ್   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್ . ಶ್ರೀಜೇಶ್ ಅವರೊಂದಿಗೆ ತಂಡದ ಕೋಚ್   –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT