ಪ್ಯಾರಿಸ್: ಅಮೆರಿಕವು ಸತತ ಎಂಟನೇ ಬಾರಿ ಒಲಿಂಪಿಕ್ಸ್ ಮಹಿಳೆಯರ 4x400 ರಿಲೆ ಓಟದ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದುಕೊಂಡಿತು. ಪ್ಯಾರಿಸ್ ಒಲಿಂಪಿಕ್ಸ್ ಟ್ರ್ಯಾಕ್ ಮತ್ತು ಫಿಲ್ಡ್ ಸ್ಪರ್ಧೆಗಳಲ್ಲಿ ಅಮೆರಿಕವು 14 ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಒಲಿಂಪಿಕ್ಸ್‌ನಲ್ಲಿ ಎರಡು ಬಾರಿಯ 400 ಮೀ. ಹರ್ಡಲ್ಸ್ ಚಾಂಪಿಯನ್ ಸಿಡ್ನಿ ಮೆಕ್‌ಲಾಗ್ಲಿನ್ ಲೆವ್ರೊನ್ ಮತ್ತು 200 ಮೀ. ಚಿನ್ನದ ಪದಕ ವಿಜೇತ ಗ್ಯಾಬಿ ಥಾಮಸ್ ಅವರನ್ನೊಳಗೊಂಡ ಅಮೆರಿಕದ ತಾರಾ ಓಟಗಾರ್ತಿಯರ ತಂಡವು 3 ನಿಮಿಷ 15.27 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಬಾಚಿಕೊಂಡಿತು.
3 ನಿಮಿಷ 19.50 ನಿಮಿಷಗಳಲ್ಲಿ ಗುರಿ ತಲುಪಿದ ನೆದರ್ಲೆಂಡ್ಸ್ ತಂಡ ಬೆಳ್ಳಿ ಮತ್ತು ಗುರಿ ತಲುಪಲು 2 ನಿಮಿಷ 19.72 ಸೆಕೆಂಡು ಸಮಯ ತೆಗೆದುಕೊಂಡ ಬ್ರಿಟನ್ ತಂಡ ಕಂಚಿನ ಪದಕ ಬಾಚಿಕೊಂಡವು.
ಪುರುಷರ 4x400 ಮೀ. ರಿಲೆ ಸ್ಪರ್ಧೆಯಲ್ಲಿ ಅಮೆರಿಕ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತು.
ಬೆಂಜಮಿನ್ ರೆ, ಕ್ರಿಸ್ಟೋಫರ್ ಬೈಲಿ, ವೆರ್ನಾನ್ ನಾರ್ವುಡ್ ಮತ್ತು ಬ್ರೈಸ್ ಡೆಡ್ಮನ್ ಅವರನ್ನೊಳಗೊಂಡ ತಂಡ 2 ನಿಮಿಷ 54.43 ಸೆಕೆಂಡುಗಳಲ್ಲಿ ಗುರಿ ತಲುಪಿತು.
ಬೋಟ್ಸ್‌ವಾನಾ ತಂಡ ಬೆಳ್ಳಿ ಮತ್ತು ಬ್ರಿಟನ್ ತಂಡ ಕಂಚಿನ ಪದಕ ಪಡೆದುಕೊಂಡವು