ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಅನ್ಶು ಮಲಿಕ್ ಸೋಲು ಕಂಡಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಅನ್ಶು ಮಲಿಕ್ ಅವರು ಮೊದಲ ಸುತ್ತಿನಲ್ಲೇ ಅಮೆರಿಕದ ಪ್ರಬಲ ಕುಸ್ತಿಪಟು ಹೆಲೆನ್ ಮಾರೊಲಿಸ್ ವಿರುದ್ಧ 7-2ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಅನುಭವಿ ಕುಸ್ತಿಪಟು ಆಗಿರುವ ಹೆಲೆನ್, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
2021ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅನ್ಶು ಅವರನ್ನೇ ಮಣಿಸಿದ್ದ ಹೆಲೆನ್, ಚಿನ್ನದ ಪದಕ ಜಯಿಸಿದ್ದರು. ಅಂದು ಅನ್ಶು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಮಗದೊಂದು ಅವಕಾಶ?
ಹಾಗೊಂದು ವೇಳೆ ಮೂರು ಬಾರಿ ವಿಶ್ವ ಚಾಂಪಿಯನ್ ಹೆಲೆನ್, ಫೈನಲ್‌ಗೆ ಪ್ರವೇಶಿಸಿದ್ದಲ್ಲಿ ರೆಪೆಷಾಜ್ ಸುತ್ತಿನಲ್ಲಿ ಆಡುವ ಅವಕಾಶವನ್ನು ಅನ್ಶು ಮಲಿಕ್ ಗಿಟ್ಟಿಸಿಕೊಳ್ಳಲಿದ್ದಾರೆ.