ನವದೆಹಲಿ: ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಕೊಡಬೇಕು. ತೂಕದ ನಿಯಮವನ್ನು ಪರಿಷ್ಕರಣೆಗೊಳಿಸಬೇಕು ಎಂದು ಅಮೆರಿಕದ ಕುಸ್ತಿ ದಂತಕಥೆ ಜೋರ್ಡನ್ ಬರೋಸ್ ಆಗ್ರಹಿಸಿದ್ದಾರೆ.
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಜೋರ್ಡನ್ ಅವರು ಐದು ಬೇಡಿಕೆಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ವಿನೇಶ್ ಅವರನ್ನು ಅನರ್ಹಗೊಳಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತತ್‌ಕ್ಷಣದಿಂದಲೇ ನಿಯಮವನ್ನು ಪರಿಷ್ಕರಣೆಗೊಳಿಸುವ ಅಗತ್ಯವಿದೆ’ ಎಂದು ಬರೆದಿದ್ದಾರೆ.
‘ಒಂದೊಮ್ಮೆ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿದ ಸ್ಪರ್ಧಿಗಳಿಗೆ ಬೆಳ್ಳಿ ಪದಕ ಖಚಿತವಾಗಬೇಕು. ಸೆಣಸಿ ಗೆದ್ದವರಿಗೆ ಚಿನ್ನ ಸಿಗುತ್ತದೆ. ಆದ್ದರಿಂದ ವಿನೇಶ್ ಅವರು ಸೆಮಿಫೈನಲ್ ಜಯಿಸಿದಾಗಲೇ ಬೆಳ್ಳಿ ಖಚಿತವಾಗಿತ್ತು. ಆದ್ದರಿಂದ ಅವರಿಗೆ ನೀಡಬೇಕು’ ಎಂದಿದ್ದಾರೆ.
‘ಎರಡನೇ ದಿನ ನಡೆಸುವ ತೂಕದ ಪರೀಕ್ಷೆಯಲ್ಲಿ ಹೆಚ್ಚುವರಿ 1 ಕೆ.ಜಿ.ಗೆ ಅವಕಾಶ ಕೊಡಬೇಕು. ತೂಕವನ್ನು ಬೆಳಿಗ್ಗೆ 8.30ರ ಬದಲು 10.30ಕ್ಕೆ ತೆಗೆದುಕೊಳ್ಳಬೇಕು‘ ಎಂದೂ ಸಲಹೆ ನೀಡಿದ್ದಾರೆ.
ಭಾರತದ ಒಲಿಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಹಾಗೂ ಗೀತಾ ಫೋಗಟ್ ಅವರೂ ವಿನೇಶ್‌ಗೆ ಬೆಳ್ಳಿ ನೀಡುವಂತೆ ಆಗ್ರಹಿಸಿದ್ದಾರೆ.