ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಪ್ರಕರಣ: ತುರ್ತು ರಜೆ ಪಡೆದು ಕಾನೂನು ಹೋರಾಟಕ್ಕೆ ಮುಂದಾದ ಹಾಕಿ ಆಟಗಾರ

Published 8 ಫೆಬ್ರುವರಿ 2024, 11:27 IST
Last Updated 8 ಫೆಬ್ರುವರಿ 2024, 11:27 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಭಾರತದ ಹಾಕಿ ಆಟಗಾರ ವರುಣ್‌ ಕುಮಾರ್‌ ಅವರು ಎಐಎಚ್‌ ಪ್ರೊ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಕಾನೂನು ಹೋರಾಟದ ಸಲುವಾಗಿ ತುರ್ತು ರಜೆ ಪಡೆದಿರುವ ಅವರು, 'ಹಣಕ್ಕಾಗಿ ತಮ್ಮ ವಿರುದ್ಧ ಆರೋಪ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ.

ಪ್ರಕರಣವು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ಹೇಳಿರುವ 28 ವರ್ಷದ ವರುಣ್‌ಗೆ 'ಹಾಕಿ ಇಂಡಿಯಾ' ತುರ್ತು ರಜೆ ನೀಡಿದೆ.

ವರುಣ್‌ ಅವರು, ತಮ್ಮ ಮೇಲೆ ಬಾಲ್ಯದ ದಿನಗಳಿಂದಲೂ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

22 ವರ್ಷದ ಯುವತಿಯು ಫೆಬ್ರುವರಿ 5ರಂದು ದಾಖಲಿಸಿರುವ ದೂರಿನಲ್ಲಿ, ವರುಣ್‌ 2018ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ತಾನು ಬಾಲಕಿ ಎಂಬುದು ಗೊತ್ತಿದ್ದರೂ ಮದುವೆಯಾಗುವುದಾಗಿ ನಂಬಿಸಿ ಹಲವು ಸಲ ಅತ್ಯಾಚಾರವೆಸಗಿದ್ದ ಎಂದು ಉಲ್ಲೇಖಿಸಿದ್ದಾರೆ.

ಈ ಸಂಬಂಧ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಅವರಿಗೆ ಪತ್ರ ಬರೆದಿರುವ ವರುಣ್‌, ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

'ನಾನು ಈ ಹಿಂದೆ ಸಂಬಂಧ ಹೊಂದಿದ್ದ ಯುವತಿ ನನ್ನ ವಿರುದ್ಧ ದಾಖಲಿಸಿರುವ ಸುಳ್ಳು ಮತ್ತು ಕ್ಷುಲ್ಲಕ ದೂರಿನ ಬಗ್ಗೆ ಮಾಧ್ಯಮಗಳ ವರದಿಯಿಂದ ತಿಳಿಯಿತು. ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆಯಾದರೂ, ಈ ವಿಚಾರವಾಗಿ ಪೊಲೀಸ್‌ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ' ಎಂದು ಹೇಳಿದ್ದಾರೆ.

'ಇದು, ನನ್ನಿಂದ ಹಣ ದೋಚುವುದಕ್ಕಾಗಿ ಮತ್ತು ನನ್ನ ಹೆಸರು ಕೆಡಿಸುವುದಕ್ಕಾಗಿ ಮಾಡಿರುವ ಆರೋಪವಲ್ಲದೆ ಮತ್ತೇನೂ ಅಲ್ಲ. ಏಕೆಂದರೆ ನಾನು ಹಾಕಿ ಆಟಗಾರನಾಗಿ ಭಾರತದ ಪರ ಆಡಿದ್ದೇನೆ. ಅರ್ಜುನ ಪ್ರಶಸ್ತಿ ಪಡೆದಿದ್ದೇನೆ. ಇಂತಹ ಪ್ರಕರಣ ದಾಖಲಿಸುವುದರಿಂದ ನನ್ನ ವೃತ್ತಿಜೀವನ ಮತ್ತು ಹೆಸರಿಗೆ ಧಕ್ಕೆ ಉಂಟುಮಾಡಬಹುದು ಎಂಬುದು ಆಕೆಗೆ ಚೆನ್ನಾಗಿ ಗೊತ್ತಿದೆ' ಎಂದು ದೂರಿದ್ದಾರೆ.

ಸದ್ಯ ಪ್ರೋ ಲೀಗ್‌ ಸಲುವಾಗಿ ಭುವನೇಶ್ವರದಲ್ಲಿ ಭಾರತ ತಂಡದೊಂದಿಗೆ ಇರುವ ವರುಣ್‌, ಕಾನೂನು ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

'ಕಾನೂನು ಹೋರಾಟ ನಡೆಸುವುದಕ್ಕಾಗಿ ತಮಗೆ ತುರ್ತು ರಜೆ ಬೇಕಾಗಿದೆ' ಎಂದಿರುವ ಅವರು, 'ದುರದೃಷ್ಟವಶಾತ್‌ ನಾನೀಗ ಪ್ರೋ ಲೀಗ್‌ನಲ್ಲಿ ಆಡುವ ಸ್ಥಿತಿಯಲ್ಲಿ ಇಲ್ಲ' ಎಂದು ಮನವರಿಕೆ ಮಾಡಿದ್ದಾರೆ.

'ಈ ಪ್ರಕರಣವು ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೊಡೆತ ನೀಡಿದೆ. ಇದು ನನಗೆ ಹಾಗೂ ನನ್ನ ಕುಟುಂಬದ ಪಾಲಿಗೆ ಅತ್ಯಂತ ಕಠಿಣ ಸಂದರ್ಭವಾಗಿದೆ. ಕ್ರೀಡಾಪಟುವಾಗಿ ನಾನು ಕೊನೆವರೆಗೂ ಹೋರಾಟ ನಡೆಸುತ್ತೇನೆ. ಈ ಕಠಿಣ ಸಂದರ್ಭದಲ್ಲಿ ನಿಮ್ಮ ಸಹಕಾರವನ್ನು ಕೋರುತ್ತೇನೆ' ಎಂದು ಮನವಿ ಮಾಡಿದ್ದಾರೆ.

ಟಿರ್ಕೆ ಮಾತ್ರವಲ್ಲದೆ, ತಂಡದ ಕೋಚ್‌ ಕ್ರೇಗ್‌ ಫಲ್ಟಾನ್‌ ಮತ್ತು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲನಾಥ್‌ ಸಿಂಗ್‌ ಅವರಿಗೂ ವರುಣ್‌ ಪತ್ರ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT