ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಪನ್ ಬ್ಯಾಡ್ಮಿಂಟನ್:ಎಂಟರ ಘಟ್ಟಕ್ಕೆ ಪ್ರಣಯ್, ಸಾತ್ವಿಕ್–ಚಿರಾಗ್

Published 23 ನವೆಂಬರ್ 2023, 13:42 IST
Last Updated 23 ನವೆಂಬರ್ 2023, 13:42 IST
ಅಕ್ಷರ ಗಾತ್ರ

ಶೆಂಜೆನ್ : ಭಾರತದ ಎಚ್‌.ಎಸ್. ಪ್ರಣಯ್ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ –ಚಿರಾಗ್ ಶೆಟ್ಟಿ  ಅವರು ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದ  ಪ್ರಣಯ್  ಈ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಜಯದ ಭರವಸೆ ಮೂಡಿಸಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಅವರು 21–12, 21–18ರಿಂದ ಡೆನ್ಮಾರ್ಕಿನ ಮ್ಯಾಗ್ನಸ್ ಜಾನೆಸನ್ ವಿರುದ್ಧ ಜಯಿಸಿದರು.

40 ನಿಮಿಷಗಳ ಹೋರಾಟದಲ್ಲಿ  ಪ್ರಣಯ್ ಪಾರಮ್ಯ ಮೆರೆದರು. ಅವರು ಈ ಟೂರ್ನಿಯಲ್ಲಿ ಎಂಟನೇ ಶ್ರೇಯಾಂಕದಲ್ಲಿದ್ದಾರೆ. ಮೊದಲ ಗೇಮ್‌ನಲ್ಲಿ ಅವರಿಗೆ ಅಷ್ಟೇನೂ ಕಷ್ಟದ ಸವಾಲು ಎದುರಾಗಲಿಲ್ಲ. ಆದರೆ ಎರಡನೇ ಗೇಮ್‌ನಲ್ಲಿ ಮ್ಯಾಗ್ನಸ್‌ ತುಸು ಹೋರಾಟ ತೋರಿದರು.

15ನೇ ಅಂಕದವರೆಗೂ ಜಿದ್ದಾಜಿದ್ದಿ ಏರ್ಪಟ್ಟಿತ್ತು. ನಂತರ 18ರ ಅಂಕದಲ್ಲಿಯೂ ಸಮಬಲಕ್ಕೆ ಬಂದರು. ಈ ಹಂತದಲ್ಲಿ ತಮ್ಮ ಆಟವನ್ನು ಮತ್ತಷ್ಟು ಚುರುಕುಗೊಳಿಸಿದ ಪ್ರಣಯ್ ಎದುರಾಳಿಗೆ ಒಂದೂ ಪಾಯಿಂಟ್ ಬಿಟ್ಟುಕೊಡದೇ ಗೆಲುವಿನ ಗುರಿ ತಲುಪಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್ ಜಪಾನಿನ ಕೊಡೊಯ್ ನರೋಕಾ ವಿರುದ್ಧ ಸೆಣಸುವರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಶ್ರೇಯಾಂಕದಲ್ಲಿರುವ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಡಬಲ್ಸ್‌ ವಿಭಾಗದಲ್ಲಿ 21–15–21–16ರಿಂದ ಜಪಾನಿನ ಅಕಿರಾ ಕೊಗಾ ಮತ್ತು ತೈಚಿ ಸೈಟೊ ವಿರುದ್ಧ ಜಯಭೇರಿ ಬಾರಿಸಿದರು.

ಭಾರತದ ಜೋಡಿಯು ಈಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತ್ತು.

ಎಂಟರ ಘಟ್ಟದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಎಂಟರ ಘಟ್ಟದಲ್ಲಿ ಇಂಡೋನೆಷ್ಯಾದ ಲಿಯೊ ರೊಲಿ ಕಾರ್ನಾಡೊ ಮತ್ತು ಡೇನಿಲ್ ಮಾರ್ಟಿನ್ ವಿರುದ್ಧ ಆಡಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT