ನವದೆಹಲಿ: ಚಿಕುನ್‌ಗುನ್ಯಾದಿಂದ ದೇಹದ ಮೇಲೆ ಉಂಟಾಗಿರುವ ಸುಸ್ತಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು ಅನುವಾಗುವಂತೆ ಕೆಲಸಮಯ ಆಟದಿಂದ ವಿರಾಮ ತೆಗೆದುಕೊಳ್ಳುವುದಾಗಿ ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅವರ ಆಟದ ಮೇಲೆ ಇದು ತೀವ್ರವಾಗಿ ಪರಿಣಾಮ ಬೀರಿತ್ತು. 2022ರ ಥಾಮಸ್ ಕಪ್ ಪ್ರಶಸ್ತಿ ವಿಜೇತ ಹಾಗೂ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಪ್ರಣಯ್, ಒಲಿಂಪಿಕ್ಸ್ ಕ್ರೀಡೆಗಳಿಗೆ ವಾರಗಳ ಮೊದಲು ಚಿಕುನ್‌ಗುನ್ಯಾ ಪೀಡಿತರಾಗಿದ್ದರು. ಜ್ವರ, ಅತೀವ ಗಂಟುನೋವು ಇದರ ಲಕ್ಷಣ.
‘ದುರದೃವಶಾತ್, ಚಿಕುನ್‌ಗುನ್ಯಾ ಜೊತೆಗಿನ ಹೋರಾಟದಿಂದ ನನ್ನ ದೇಹ ಬಳಲಿದೆ. ಇದರಿಂದ ತೀವ್ರ ಮೈ ಕೈನೋವು ನೋವು ನನ್ನನ್ನು ಬಾಧಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಉತ್ತಮ ಆಟ ನೀಡಲು ನನ್ನಿಂದ ಅಸಾಧ್ಯ’ ಎಂದು ಪ್ರಣಯ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘ನನ್ನ ತಂಡದ ಜೊತೆ ಕೂಲಂಕಷವಾಗಿ ಸಮಾಲೋಚಿಸಿದ್ದು, ಚೇತರಿಸಿಕೊಳ್ಳುವ ಕಡೆ ಗಮನಹರಿಸುವ ಸಲುವಾಗಿ ಮುಂದಿನ ಕೆಲವು ಟೂರ್ನಿಗಳಿಂದ ಹಿಂದೆಸರಿಯಲು ತೀರ್ಮಾನಿಸಿದ್ದೇನೆ. ಸವಾಲಿನ ಸಮಯದಲ್ಲಿ ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಾನು ಮತ್ತೆ ಇನ್ನಷ್ಟ ಗಟ್ಟಿಯಾಗಿ ಮರಳುವೆ’ ಎಂದೂ 32 ವರ್ಷ ವಯಸ್ಸಿನ ಆಟಗಾರ ಬರೆದಿದ್ದಾರೆ.
ಆದರೆ ಎಷ್ಟು ಸಮಯ ಆಟದಿಂದ ದೂರಿವಿರುವುದಾಗಿ ಅವರು ತಿಳಿಸಿಲ್ಲ. ಹಿಂದೆ ಸರಿದಿರುವ ಟೂರ್ನಿಗಳ ಬಗ್ಗೆಯೂ ಕೇರಳದ ಆಟಗಾರ ವಿವರ ನೀಡಿಲ್ಲ.
2023ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಆಟಗಾರ ಪ್ರಣಯ್, ಪ್ಯಾರಿಸ್ ಕ್ರೀಡೆಗಳಲ್ಲಿ ಗುಂಪು ಹಂತದ ಪಂದ್ಯಗಳನ್ನು ಗೆದ್ದಿದ್ದರು. ಆದರೆ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸ್ವದೇಶದ ಲಕ್ಷ್ಯ ಸೇನ್ ಅವರಿಗೆ ಮಣಿದಿದ್ದರು.