ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌ | ಬಿಗಿ ಹಿಡಿತ: 3ನೇ ಸ್ಥಾನಕ್ಕೆ ಹರಿಯಾಣ ಜಿಗಿತ

ವಿನಯ್‌, ಪ್ರಪಂಚನ್‌, ಮೋಹಿತ್ ನಂದಾಲ್ ಮಿಂಚು
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪುಣೆ: ಆಲ್‌ರೌಂಡ್ ಆಟದ ಮೂಲಕ ಕಬಡ್ಡಿ ಪ್ರಿಯರಿಗೆ ರೋಮಾಂಚನ ನೀಡಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಇಲ್ಲಿನ ಬಾಲೇವಾಡಿಯ ಶ್ರೀಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಹರಿಯಾಣ 31–29ರಲ್ಲಿ ಮಣಿಸಿತು.

ಹಿಂದಿನ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ ವಿರುದ್ಧ ಗೆಲುವು ಸಾಧಿಸಿದ್ದ ಹರಿಯಾಣ ಸ್ಟೀಲರ್ಸ್ ಭರವಸೆಯಿಂದಲೇ ಕಣಕ್ಕೆ ಇಳಿದಿತ್ತು. ಪ್ರೊ ಕಬಡ್ಡಿಯಲ್ಲಿ ಈವರೆಗಿನ ಸಾಧನೆಯ ಬಲವೂ ತಂಡದ ಬೆನ್ನಿಗಿತ್ತು. ಈ ಹಿಂದೆ ಉಭಯ ತಂಡಗಳು ಒಟ್ಟು ಏಳು ಬಾರಿ ಮುಖಾಮುಖಿಯಾದಾಗ ಗುಜರಾತ್ ನಾಲ್ಕರಲ್ಲಿ ಜಯ ಸಾಧಿಸಿ ಒಂದನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ವಿನಯ್ ಮತ್ತು ರಾಕೇಶ್ ಕ್ರಮವಾಗಿ ಹರಿಯಾಣ ಮತ್ತು ಗುಜರಾತ್ ತಂಡಗಳ ಮೊದಲ ರೈಡಿಂಗ್‌ನಲ್ಲಿ ತಲಾ ಒಂದೊಂದು ಪಾಯಿಂಟ್ ತಂದುಕೊಟ್ಟರು. ಹರಿಯಾಣ ತಂಡ ನಿಧಾನಕ್ಕೆ ಹಿಡಿತ ಸಾಧಿಸಿ ಮೊದಲಾರ್ಧದ ಮುಕ್ತಾಯಕ್ಕೆ 17–10ರ ಮುನ್ನಡೆ ಗಳಿಸಿತು.

ಗುಜರಾತ್ ದ್ವಿತೀಯಾರ್ಧದ ಆರಂಭದಲ್ಲಿ ಚೇತರಿಸಿಕೊಂಡಿತು. 26ನೇ ನಿಮಿಷ ಪ್ರಪಂಚನ್‌ ಅವರನ್ನು ಬಲೆಗೆ ಕೆಡವಿ ಎದುರಾಳಿ ಅಂಗಣವನ್ನು ಖಾಲಿ ಮಾಡಿತು. ಪಂದ್ಯದ ಮುಕ್ತಾಯಕ್ಕೆ 9 ನಿಮಿಷ ಬಾಕಿ ಇರುವಾಗ 22–22ರ ಸಮಬಲ ಸಾಧಿಸುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತು.

ಪಟ್ಟು ಬಿಡದ ಹರಿಯಾಣ ಕೊನೆಯ 5 ನಿಮಿಷಗಳು ಇರುವಾಗ 26–24ರ ಮುನ್ನಡೆ ಗಳಿಸಿ ಮತ್ತೆ ಹಳಿಗೆ ಮರಳಿತು. ಸೋನು ಅವರ ‘ಆ್ಯಂಕಲ್ ಹೋಲ್ಡ್’ ಮಾಡಿದ ಹರ್ಷ ನಿರ್ಣಾಯಕ ಪಾಯಿಂಟ್ ತಂದುಕೊಟ್ಟು ಹರಿಯಾಣವನ್ನು 29–26ರಲ್ಲಿ ಮುನ್ನಡೆಸಿದರು. ಕೊನೆಯ ನಿಮಿಷದಲ್ಲಿ ಇಬ್ಬರನ್ನು ಔಟ್ ಮಾಡಿದ ವಿನಯ್‌ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗುಜರಾತ್ ತಂಡವನ್ನು 4ನೇ ಸ್ಥಾನಕ್ಕೆ ತಳ್ಳಿದರು.

ಇಂದಿನ ಪಂದ್ಯಗಳು

ಜೈಪುರ್ ಪಿಂಕ್‌ ಪ್ಯಾಂಥರ್ಸ್‌–ಯು.ಪಿ.ಯೋಧಾ (ರಾತ್ರಿ 8.00)

ಬೆಂಗಳೂರು ಬುಲ್ಸ್‌–ಪುಣೇರಿ ಪಲ್ಟಾನ್‌ (ರಾತ್ರಿ 9.00)

ಗುಜರಾತ್ ಜೈಂಟ್ಸ್ ತಂಡದ ರಾಕೇಶ್ ಅವರನ್ನು ಪುಶ್ ಮಾಡಿದ ಹರಿಯಾಣ ಸ್ಟೀಲರ್ಸ್ ಆಟಗಾರರು
ಗುಜರಾತ್ ಜೈಂಟ್ಸ್ ತಂಡದ ರಾಕೇಶ್ ಅವರನ್ನು ಪುಶ್ ಮಾಡಿದ ಹರಿಯಾಣ ಸ್ಟೀಲರ್ಸ್ ಆಟಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT