ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬುಲ್ಸ್‌ಗೆ ಬೆದರಿದ ಪಿಂಕ್‌ ಪಡೆ

ರೋಹಿತ್ ‘ಸೂಪರ್’; ಮೋಹಿತ್ ಮಿಂಚು
Last Updated 25 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಶನಿವಾರ ಕೊನೆಯ ಕ್ಷಣದಲ್ಲಿ ಜಯವನ್ನು ಕೈಚೆಲ್ಲಿದ್ದ ಬೆಂಗಳೂರು ಬುಲ್ಸ್‌ ಭಾನುವಾರ ಆಕ್ರಮಣಕಾರಿ ಆಟವಾಡಿ ಎದುರಾಳಿಗಳನ್ನು ಕಂಗೆಡಿಸಿತು. ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಬುಲ್ಸ್‌ ತಂಡ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಎದುರು 41–30ರಲ್ಲಿ ಜಯ ಗಳಿಸಿತು.

ನಾಯಕ ರೋಹಿತ್ ಕುಮಾರ್ ಅವರ ‘ಸೂಪರ್’ ಆಟ (13 ಪಾಯಿಂಟ್ಸ್‌; 10 ಟಚ್‌ ಪಾಯಿಂಟ್ಸ್‌), ಪವನ್‌ ಶೆರಾವತ್‌ (8; 3 ಬೋನಸ್‌) ಅವರ ಅಮೋಘ ರೈಡಿಂಗ್‌ ಮತ್ತು ಮೋಹಿತ್ ಶೆರಾವತ್‌–ಸೌರಭ್ ನಂದಾಲ್‌ (ತಲಾ 5 ಪಾಯಿಂಟ್ಸ್‌) ಅವರ ರೋಮಾಂಚಕ ಟ್ಯಾಕ್ಲಿಂಗ್‌, ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

ಮೊದಲ ಎರಡು ನಿಮಿಷ ನೀರಸವಾಗಿದ್ದ ಪಂದ್ಯದಲ್ಲಿ ನಂತರ ಉಭಯ ತಂಡಗಳ ರೈಡಿಂಗ್ ಮತ್ತು ಟ್ಯಾಕ್ಲಿಂಗ್ ರಂಗೇರಿತು. ಹೀಗಾಗಿ ಐದನೇ ನಿಮಿಷದ ಮುಕ್ತಾಯಕ್ಕೆ ಸ್ಕೋರ್ 3–3ರಲ್ಲಿ ಸಮ ಆಯಿತು; ಪ್ರೇಕ್ಷಕರ ಕುತೂಹಲ ಹೆಚ್ಚಿತು.

ಮೋಹಿತ್‌ ನೀಡಿದ ‘ಸೌರಭ’:ಐದನೇ ನಿಮಿಷದ ನಂತರ ಬುಲ್ಸ್‌ನ ಎಡ ಮತ್ತು ಬಲ ಕಾರ್ನರ್‌ಗಳ ಡಿಫೆಂಡರ್‌ಗಳು ಲಯ ಕಂಡುಕೊಂಡರು. ಹೀಗಾಗಿ ಎದುರಾಳಿ ರೈಡರ್‌ಗಳು ತಬ್ಬಿ‌ಬ್ಬಾದರು. ರೋಹಿತ್‌ ಕುಮಾರ್ ಮತ್ತು ಪವನ್ ಕೂಡ ಪಾಯಿಂಟ್‌ಗಳನ್ನು ಗಳಿಸಲು ಆರಂಭಿಸಿದ್ದರಿಂದ ಬುಲ್ಸ್ ಮುನ್ನಡೆ ಏರುಗತಿಯಲ್ಲಿ ಸಾಗಿತು. 10ನೇ ನಿಮಿಷದಲ್ಲಿ ಪವನ್ ಈ ಆವೃತ್ತಿಯ 100ನೇ ರೈಡ್ ಮಾಡಿದರು. ಎದುರಾಳಿ ತಂಡ ಔಲ್ ಔಟ್ ಆದಾಗ ಬುಲ್ಸ್‌ ಮುನ್ನಡೆ 13–4 ಆಯಿತು. ಮೊದಲಾರ್ಧದ ಮುಕ್ತಾಯಕ್ಕೆ ಈ ಮುನ್ನಡೆ 22–8ಕ್ಕೆ ಏರಿತು.

ರೋಹಿತ್ ಕುಮಾರ್ ಸೂಪರ್ ಟೆನ್‌:ದ್ವಿತೀಯಾರ್ಧದಲ್ಲೂ ಬುಲ್ಸ್‌ ಪಾರುಪತ್ಯ ಮುಂದುವರಿಯಿತು. ದ್ವಿತೀಯಾರ್ಧದ ಆರಂಭದಲ್ಲೇ ಜೈಪುರ ಎರಡನೇ ಬಾರಿ ಆಲ್‌ ಔಟ್‌ ಆಯಿತು. ರೋಹಿತ್ ಕುಮಾರ್ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗದೆ ಜೈಪುರ ತಂಡದ ಆಟಗಾರರು ಪರದಾಡಿದರು.

27ನೇ ನಿಮಿಷದಲ್ಲಿ ಜೈಪುರದ ಮೂವರನ್ನು ಔಟ್ ಮಾಡಿ ‘ಸೂಪರ್ ಷೋ’ ನೀಡಿದ ರೋಹಿತ್‌, ಲೀಗ್‌ನಲ್ಲಿ ತಮ್ಮ 25ನೇ ‘ಸೂಪರ್ 10’ ಸಾಧನೆಯನ್ನೂ ಮಾಡಿದರು. ಈ ಆವೃತ್ತಿಯಲ್ಲಿ ಇದು ಅವರ ಎರಡನೇ ‘ಸೂಪರ್ 10’ ಆಗಿದೆ. ಈ ಆವೃತ್ತಿಯ 50ನೇ ರೈಡ್ ಪಾಯಿಂಟ್ ಗಳಿಸಿದ ಸಂಭ್ರಮವೂ ಅವರದಾಯಿತು. ಒಟ್ಟಾರೆ 1300 ರೈಡ್ ಪಾಯಿಂಟ್‌ ಗಳಿಸಿದ ಸಾಧನೆಯ ಖುಷಿಯಲ್ಲಿ ಅವರು ಪುಳಕಗೊಂಡರು.28ನೇ ನಿಮಿಷದಲ್ಲಿ ರೋಹಿತ್ ಅವರನ್ನು ಸೂಪರ್ ಟ್ಯಾಕಲ್ ಮೂಲಕ ಕೆಡವಿದ ಜೈಪುರ ಮುಂದಿನ ಐದು ನಿಮಿಷ ಬುಲ್ಸ್‌ಗೆ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ 8 ಪಾಯಿಂಟ್ ಕಲೆ ಹಾಕಿತು. ಆದರೂ ಸೋಲಿನಿಂದ ತಪ್ಪಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಆತಿಥೇಯರಿಗೆ ಗೆಲುವು: ಮತ್ತೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ 36–27ರಲ್ಲಿ ಯು.ಪಿ.ಯೋಧಾವನ್ನು ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ನವೀನ್‌ ಕುಮಾರ್‌ 16 ಪಾಯಿಂಟ್ಸ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT