ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ರಾಜಾವತ್‌, ಪ್ರಣಯ್‌ ಮುನ್ನಡೆ

ಇಂಡಿಯಾ ಓಪನ್: ಮೊದಲ ಸುತ್ತಿನಲ್ಲೇ ಲಕ್ಷ್ಯ ಸೇನ್‌ ನಿರ್ಗಮನ
Published 16 ಜನವರಿ 2024, 16:20 IST
Last Updated 16 ಜನವರಿ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯುವ ಪ್ರತಿಭೆ ಪ್ರಿಯಾಂಶು ರಾಜಾವತ್‌ ಅವರು ಮಂಗಳವಾರ ಇಲ್ಲಿ ಆರಂಭವಾದ ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಸರ ಸಿಂಗಲ್ಸ್‌ನಲ್ಲಿ  ಲಕ್ಷ್ಯ ಸೇನ್‌ ಅವರಿಗೆ ಆಘಾತ ನೀಡಿದರು. ಇನ್ನೊಂದು ಪಂದ್ಯದಲ್ಲಿ ಏಷ್ಯನ್‌ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಎಚ್‌.ಎಸ್‌. ಪ್ರಣಯ್‌ ಅವರೂ ಜಯಗಳಿಸಿದರು.

ಕೆ.ಡಿ. ಜಾಧವ್ ಒಳಾಂಗಣ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿರುವ  ರಾಜಾವತ್‌ ಅವರು 16-21, 21-16, 21-13ರಿಂದ 19ನೇ ಕ್ರಮಾಂಕದ ಸೇನ್‌ ಅವರಿಗೆ ಆಘಾತ ನೀಡಿದರು. 75 ನಿಮಿಷಗಳ ಗೇಮ್‌ನಲ್ಲಿ 22 ವರ್ಷದ ಸೇನ್‌ ಮೇಲುಗೈ ಸಾಧಿಸಿದರು. ಆದರೆ, ನಂತರದ ಗೇಮ್‌ನಲ್ಲಿ 21 ವರ್ಷದ ರಾಜಾವತ್‌ ಪಾರಮ್ಯ ಮೆರೆದರು.

ಈ ಋತುವಿನ ಮೊದಲ ಟೂರ್ನಿಯಲ್ಲೂ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದ್ದ ಸೇನ್‌ ಅವರಿಗೆ ಒಲಿಂಪಿಕ್ಸ್‌ ಅರ್ಹತೆ ಮತ್ತಷ್ಟು ಕಠಿಣವಾಗಿದೆ.

ವಿಶ್ವದ 9ನೇ ರ‍್ಯಾಂಕ್‌ನ ಆಟಗಾರ ಪ್ರಣಯ್‌ ಅವರು ಮೊದಲ ಸುತ್ತಿನಲ್ಲಿ 21-6, 21-19ರಿಂದ  ಚೀನಾ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಮಣಿಸಿದರು. ಮೊದಲ ಗೇಮ್‌ ಅನ್ನು ಸುಲಭವಾಗಿ ಗೆದ್ದಿದ್ದ ಪ್ರಣಯ್‌ಗೆ ಎರಡನೇಯದ್ದರಲ್ಲಿ  ಪ್ರಬಲ ಸ್ಪರ್ಧೆ ಎದುರಾಯಿತು. ಒಂದು ಹಂತದಲ್ಲಿ 11–16ರ ಹಿನ್ನಡೆ ಹೊಂದಿದ್ದ ಪ್ರಣಯ್‌ ಮತ್ತೆ ಚೇತರಿಸಿಕೊಂಡು ಹಿಡಿತ ಸಾಧಿಸಿದರು.

ವಿಶ್ವದ 13ನೇ ಕ್ರಮಾಂಕದ ಎದುರಾಳಿಯನ್ನು 42 ನಿಮಿಷದಲ್ಲಿ ಸೋಲಿಸಿದ 31 ವರ್ಷದ ಪ್ರಣಯ್‌, ಎರಡನೇ ಸುತ್ತಿನಲ್ಲಿ ರಾಜಾವತ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಎಚ್‌.ಎಸ್‌. ಪ್ರಣಯ್‌ –ಪಿಟಿಐ ಚಿತ್ರ
ಎಚ್‌.ಎಸ್‌. ಪ್ರಣಯ್‌ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT