ಪ್ಯಾರಿಸ್: ಭಾರತ ಹಾಕಿ ತಂಡದ ಪ್ರಮುಖ ಡಿಫೆಂಡರ್ ಅಮಿತ್ ರೋಹಿದಾಸ್ ಅವರು ಒಲಿಂಪಿಕ್ಸ್‌ನಲ್ಲಿ ಜರ್ಮನಿ ವಿರುದ್ಧ ಮಂಗಳವಾರ ನಡೆಯಲಿರುವ ಸೆಮಿಫೈನಲ್‌ಗೆ ಅಲಭ್ಯರಾಗಿದ್ದಾರೆ.
ಗ್ರೇಟ್ ಬ್ರಿಟನ್ ವಿರುದ್ಧ ಭಾನುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ರೋಹಿದಾಸ್ ಅವರಿಗೆ ರೆಫ್ರಿ ರೆಡ್ ಕಾರ್ಡ್ ನೀಡಿದ್ದರು. ಇದರ ಬೆನ್ನಲ್ಲೇ ಒಂದು ಪಂದ್ಯದ ನಿಷೇಧವನ್ನು ಅವರಿಗೆ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (FIH) ಭಾರತೀಯ ಹಾಕಿ ಒಕ್ಕೂಟ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಅಂತರರಾಷ್ಟ್ರೀಯ ಒಕ್ಕೂಟ ತಿರಸ್ಕರಿಸಿದೆ. ಇದು ಎಂಟು ಬಾರಿ ಒಲಿಂಪಿಕ್ಸ್ ಚಾಂಪಿಯನ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಪಂದ್ಯದ 2ನೇ ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಸಂದರ್ಭದಲ್ಲಿ ಬ್ರಿಟನ್‌ನ ವಿಲ್ ಕಲ್ನಾನ್ ಅವರ ಮುಖಕ್ಕೆ ಸ್ಟಿಕ್ ತಾಕಿತ್ತು. ರೋಹಿದಾಸ್ ಅವರನ್ನು ಅಂಪೈರ್ ಹೊರಕಳಿಸಿದರು. ಭಾರತದ ಆಟಗಾರರು ‘ಹಳದಿ ಕಾರ್ಡ್’ ಎಚ್ಚರಿಕೆಯೇ ತಪ್ಪು ಎಂಬ ಭಾವನೆಯನ್ನೇನೊ ವ್ಯಕ್ತಪಡಿಸಿದರು. ಆದರೆ ವಿಡಿಯೊ ಅಂಪೈರ್ ಬೆಂಜಮಿನ್ ಗೊಂಟ್ಜನ್ ಅವರು ಎಚ್ಚರಿಕೆಯ ಪರಿಶೀಲನೆಯ ನಂತರ ರೆಡ್ ಕಾರ್ಡ್ ನೀಡಿದರು. ಇದರಿಂದ ಅಮಿತ್ ಹೊರಹೋಗಬೇಕಾಯಿತು.
ನಂತರ ಮೈದಾನದಲ್ಲಿ 10 ಸದಸ್ಯರನ್ನೊಳಗೊಂಡ ಭಾರತ ತಂಡ ಸಮರಾಂಗಣದಲ್ಲಿದ್ದ ಯೋಧರಂತೆ ಹೋರಾಡಿದರು. 22ನೇ ನಿಮಿಷ ಪೆನಾಲ್ಟಿ ಕಾರ್ನರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನೂ ಗಳಿಸಿಕೊಟ್ಟರು. ಪದೇಪದೇ ಮುಷ್ಟಿಕಟ್ಟಿಕೊಂಡು ಸಂಭ್ರಮ ಆಚರಿಸಿ ತಂಡಕ್ಕೆ ವಿಶ್ವಾಸ ಮೂಡಿಸಿದರು.