ಶಾತೋಹು (ಫ್ರಾನ್ಸ್): ಭಾರತದ ಶೂಟರ್ ರುಬಿನಾ ಫ್ರಾನ್ಸಿಸ್ ದಿಟ್ಟತನ ಪ್ರದರ್ಶಿಸಿ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ (ಎಸ್‌ಎಚ್1) ಸ್ಪರ್ಧೆಯಲ್ಲಿ ಏಳನೇ ಸ್ಥಾನದೊಡನೆ ಫೈನಲ್ ತಲುಪಿದರು. ಆದರೆ ಪುರುಷರ ವಿಭಾಗದಲ್ಲಿ ಸ್ವರೂಪ್ ಉನ್ಹಲ್ಕರ್ ಅವರು ಶನಿವಾರ 10 ಮೀ. ಏರ್ ರೈಫಲ್‌ನಲ್ಲಿ ಅಷ್ಟೇನೂ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ.
25 ವರ್ಷ ವಯಸ್ಸಿನ ರುಬಿನಾ ಸ್ಪರ್ಧೆಯ ಬಹುತೇಕ ಅವಧಿಯಲ್ಲಿ ಮೊದಲ ಎಂಟು ಶೂಟರ್‌ಗಳ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಕೊನೆಯ ಕೆಲವು ಸುತ್ತುಗಳಲ್ಲಿ ಅವರು ನಿಖರ ಗುರಿಯೊಡನೆ ಪದಕದ ಸುತ್ತಿಗೆ ದಾಪುಗಾಲಿಟ್ಟರು.
ಮಧ್ಯಪ್ರದೇಶದ ಶೂಟರ್, ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿದ್ದರು. ಆದರೆ ಫೈನಲ್‌ನಲ್ಲೂ ಏಳನೇ ಸ್ಥಾನದಲ್ಲೇ ಸ್ಪರ್ಧೆ ಮುಗಿಸಿದರು.
10 ಶಾಟ್‌ಗಳ ಮೊದಲ ಸರಣಿಯ ನಂತರ ಅವರು 14ನೇ ಸ್ಥಾನ ಪಡೆದಿದ್ದರು. 556ರ ಸ್ಕೋರ್‌ನೊಡನೆ ಅವರು ಎಂಟು ಶೂಟರ್‌ಗಳ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರು.
ಪ್ಯಾರಿಸ್‌ಗೆ ತಂಡ ತೆರಳುವ ಕೆಲವೇ ದಿನಗಳ ಮೊದಲು ವೈಲ್ಡ್ ಕಾರ್ಡ್ ಮೂಲಕ ರುಬಿನಾ ಪ್ಯಾರಾಲಿಂಪಿಕ್ಸ್ ಕೋಟಾ ಪಡೆದಿದ್ದರು.
ಸ್ವರೂಪ್‌ಗೆ ಸೋಲು
ಪುರುಷರ 10 ಮೀ. ಏರ್ ರೈಫಲ್ (ಎಸ್‌ಎಚ್1) ಸ್ಪರ್ಧೆಯಲ್ಲಿ 38 ವರ್ಷ ವಯಸ್ಸಿನ ಸ್ವರೂಪ್ ಕ್ವಾಲಿಫಿಕೇಷನ್ ಸುತ್ತಿನಲ್ಲಿ 14ನೇ ಸ್ಥಾನದೊಡನೆ ಹೊರಬಿದ್ದರು. ಇದು ಸ್ವರೂಪ್‌ಗೆ ಎರಡನೇ ಪ್ಯಾರಾಲಿಂಪಿಕ್ಸ್. ಟೋಕಿಯೊದಲ್ಲಿ ಅವರಿಗೆ ಕೂದಲೆಳೆಯಲ್ಲಿ ಕಂಚಿನ ಪದಕ ಕೈತಪ್ಪಿತ್ತು.
ಕೊಲ್ಹಾಪುರದ ಈ ಶೂಟರ್ ಶನಿವಾರ 613.4 ಪಾಯಿಂಟ್ಸ್ ಸಂಗ್ರಹಿಸಿದರು. ದಕ್ಷಿಣ ಕೊರಿಯಾದ ಪಾರ್ಕ್ ಜಿನ್ಹೊ 624.4 ಸ್ಕೋರ್‌ನೊಡನೆ 18 ಮಂದಿ ಸ್ಪರ್ಧಿಗಳ ಅರ್ಹತಾ ಸುರ್ತಿನಲ್ಲಿ ಅಗ್ರಸ್ಥಾನ ಪಡೆದರು.
ಸ್ವರೂಪ್ ಕ್ರಮವಾಗಿ 101.8, 103.0, 101.7, 101.8, 102.4, 102.7 ಸ್ಕೋರ್‌ನಡೊನೆ ಒಟ್ಟು 613.4 ಅಂಕ ಕಲೆಹಾಕಿದರು.
ಶೂಟಿಂಗ್ ಸ್ಪರ್ಧೆಗಳ ಮೊದಲ ದಿನವಾದ ಶುಕ್ರವಾರ 10 ಮೀ. ಏರ್ ರೈಫರ್ ಶೂಟರ್ ಅವನಿ ಲೇಖರಾ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದರು. ಇದು ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪದಕವೂ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.