ಹಾಂಗ್‌ಝೌ (ಪಿಟಿಐ): ಭಾರತದ ಶೂಟರ್‌ಗಳಾದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿ.ಎಸ್. ಅವರು ಏಷ್ಯನ್ ಕ್ರೀಡಾಕೂಟದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡರು.
ಶನಿವಾರ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತದ ಜೋಡಿ ಶೂಟ್ ಆಫ್‌ನಲ್ಲಿ 14–16 ರಿಂದ ಚೀನಾದ ಝಾಂಗ್ ಬೊವೆನ್ ಮತ್ತು ಜಿಯಾಂಗ್ ರಾನ್‌ಸ್ಕಿನ್ ಕೈಯಲ್ಲಿ ಪರಾಭವಗೊಂಡಿತು.
ಈ ಬಾರಿಯ ಕೂಟದಲ್ಲಿ ಭಾರತದ ಶೂಟರ್‌ಗಳು ಗೆದ್ದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆರು ಚಿನ್ನ, ಎಂಟು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಶೂಟರ್‌ಗಳ ಅತ್ಯುತ್ತಮ ಪ್ರದರ್ಶನ ಇದು.
ಪುರುಷರ 10 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ಗುರುವಾರ ಚಿನ್ನ ಜಯಿಸಿದ್ದ ಸರಬ್ಜೋತ್ ಅವರು ದಿವ್ಯಾ ಜತೆ ಭಾರತಕ್ಕೆ ಏಳನೇ ಬಂಗಾರದ ಪದಕ ತಂದುಕೊಡುವ ಭರವಸೆ ಮೂಡಿಸಿದ್ದರು. ಆದರೆ ಕೊನೆಯ ಹಂತದಲ್ಲಿ ನಿಖರ ಗುರಿ ಹಿಡಿಯುವಲ್ಲಿ ವಿಫಲವಾದದ್ದು, ಮುಳುವಾಗಿ ಪರಿಣಮಿಸಿತು.
ಫೈನಲ್‌ನಲ್ಲಿ 9ನೇ ಸುತ್ತಿನ ಬಳಿಕ ಭಾರತದ ಜೋಡಿ 11–7 ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಮರುಹೋರಾಟದ ನಡೆಸಿದ ಚೀನಾದ ಅನುಭವಿ ಶೂಟರ್‌ಗಳು 11–11 ಹಾಗೂ ಆ ಬಳಿಕ 14–14 ರಿಂದ ಸಮಬಲ ಸಾಧಿಸಿತು.
ಕೊನೆಯ ಅವಕಾಶದಲ್ಲಿ ರಾನ್‌ಸ್ಕಿನ್ 10.7 ಮತ್ತು ಬೊವೆನ್ 10.3 (ಒಟ್ಟು 21.0) ಪಾಯಿಂಟ್ಸ್ ಕಲೆಹಾಕಿದರೆ, ಸರಬ್ಜೋತ್ ಅವರು 9.9 ಹಾಗೂ ಕರ್ನಾಟಕದ ದಿವ್ಯಾ 10.5 (ಒಟ್ಟು 20.4) ಪಾಯಿಂಟ್ಸ್ ಸಂಗ್ರಹಿಸಿದರು.
ಅರ್ಹತಾ ಹಂತದಲ್ಲಿ ಸರಬ್ಜೋತ್ 291 ಮತ್ತು ದಿವ್ಯಾ 286 ಪಾಯಿಂಟ್ಸ್ ಕಲೆಹಾಕಿದ್ದರು. ಭಾರತ ತಂಡ ಒಟ್ಟು 577 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿತ್ತು. ಚೀನಾ ತಂಡ ಅರ್ಹತಾ ಸುತ್ತಿನಲ್ಲಿ 576 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿತ್ತು.
ದಕ್ಷಿಣ ಕೊರಿಯಾದ ಲೀ ವೊನ್‌ಹೊ ಮತ್ತು ಕಿಮ್ ಬೊಮಿ ಅವರು 16–8 ರಿಂದ ಜಪಾನ್‌ನ ಮೊರಿಕಾವ ಸೀಜಿ ಮತ್ತು ಯಮಾಡ ಸಟೊಕೊ ಅವರನ್ನು ಮಣಿಸಿ ಕಂಚು ಜಯಿಸಿದರು.
ಎರಡನೇ ಸ್ಥಾನದಲ್ಲಿ ಚೆನಾಯ್
ಭಾರತದ ಕಿನಾನ್ ಚೆನಾಯ್ ಅವರು ಪುರುಷರ ವೈಯಕ್ತಿಕ ಟ್ರ್ಯಾಪ್ ವಿಭಾಗದ ಮೊದಲ ದಿನದ ಸ್ಪರ್ಧೆಗಳ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಅವರು 75 ಶಾಟ್‌ಗಳ ಬಳಿಕ (ತಲಾ 25 ಶಾಟ್‌ಗಳ ಮೂರು ಸುತ್ತುಗಳು) 73 ಪಾಯಿಂಟ್ಸ್ ಕಲೆಹಾಕಿದ್ದಾರೆ. ಜೊರಾವರ್ ಸಿಂಗ್ ಸಂಧು ಅವರು 72 ಪಾಯಿಂಟ್ಸ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ ಪೃಥ್ವಿರಾಜ್ ತೊಂಡೈಮನ್ (70) ಅವರು 19ನೇ ಸ್ಥಾನಕ್ಕೆ ಕುಸಿತ ಕಂಡರು. ತಂಡ ವಿಭಾಗದಲ್ಲಿ ಭಾರತವು (215) ಕುವೈತ್ ಬಳಿಕ (217) ಎರಡನೇ ಸ್ಥಾನದಲ್ಲಿದೆ. ಭಾನುವಾರ 25 ಶಾಟ್‌ಗಳ ಎರಡು ಸುತ್ತುಗಳ ಬಳಿಕ ತಂಡ ವಿಭಾಗದ ಪದಕ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಅರ್ಹತಾ ಸುತ್ತಿನಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆಯುವವರು ವೈಯಕ್ತಿಕ ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.