ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | Badminton: ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್‌ಗೆ ಚಿನ್ನ

Published 7 ಅಕ್ಟೋಬರ್ 2023, 9:41 IST
Last Updated 7 ಅಕ್ಟೋಬರ್ 2023, 9:41 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ಸ್ಟಾರ್‌ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಏಷ್ಯನ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮೆರೆದರು. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಅವರು ತಂದುಕೊಟ್ಟರು.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ವಿಶ್ವದ ಮೂರನೇ ಕ್ರಮಾಂಕದ ಭಾರತದ ಜೋಡಿಯು 21-18 21-16 ರಿಂದ ದಕ್ಷಿಣ ಕೊರಿಯಾದ ಚೊಯ್ ಸೊಲ್ ಗ್ಯು– ಕಿಮ್‌ ವೊನ್ ಹೊ ಅವರನ್ನು ಮಣಿಸಿತು. ಈ ಕೂಟದಲ್ಲಿ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ದೊರತ ಮೂರನೇ ಪದಕ ಇದಾಗಿದೆ. ತಂಡ ವಿಭಾಗದಲ್ಲಿ ಭಾರತದ ಪುರುಷರ ಬಳಗ ಬೆಳ್ಳಿ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಕಂಚು ಜಯಿಸಿದ್ದರು.

1982ರ ಕೂಟದಲ್ಲಿ ಪುರುಷರ ಡಬಲ್ಸ್‌ನ ಲೆರಾಯ್ ಡಿಸಾ ಮತ್ತು ಪ್ರದೀಪ್ ಗಂಧೆ ಜೋಡಿಯು ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಬಾರಿ ಕಂಚು ಗೆದ್ದುಕೊಟ್ಟಿತ್ತು. ಆ ಆವೃತ್ತಿಯಲ್ಲಿ 5 ಕಂಚು, 2018 ಆವೃತ್ತಿಯಲ್ಲಿ ಒಂದು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಭಾರತ ಬ್ಯಾಡ್ಮಿಂಟನ್‌ನಲ್ಲಿ ಗೆದ್ದಿತ್ತು. 58 ವರ್ಷಗಳಿಂದ ಎದುರಿಸುತ್ತಿದ್ದ ಚಿನ್ನದ ಕೊರತೆಯನ್ನು ಕೊನೆಗೂ ಸಾತ್ವಿಕ್‌– ಚಿರಾಗ್ ಜೋಡಿ ನೀಗಿಸಿದೆ.

ಇಲ್ಲಿ ಚಾಂಪಿಯನ್‌ ಆದ ಭಾರತದ ಜೋಡಿಯು ಮಂಗಳವಾರ ಬಿಡುಗಡೆಯಾಗಲಿರುವ ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.

ಫೈನಲ್‌ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಜೋಡಿಗೆ ಕೊರಿಯಾ ಆಟಗಾರರಿಂದ ಪ್ರಬಲ ಪೈಪೋಟಿ ಎದುರಾಯಿತು. ಆರಂಭದಲ್ಲಿ ಚುರುಕಿನ ಆಟವಾಡಿದ ಕೊರಿಯಾದ ಜೋಡಿ ತುಸು ಮುನ್ನಡೆ ಪಡೆಯಿತು. 10–13ರಿಂದ ಹಿನ್ನಡೆಯಲ್ಲಿದ್ದಾಗ ಭಾರತದ ಆಟಗಾರರು ಪುಟಿದೆದ್ದು, ನಿಖರವಾದ ಆಟದ ಮೂಲಕ ಹಿಡಿತ ಸಾಧಿಸಿದರು.

ಎರಡನೇ ಗೇಮ್‌ನ ಆರಂಭದಿಂದಲೇ ಮುನ್ನಡೆ ಪಡೆದ ಸಾತ್ವಿಕ್‌– ಚಿರಾಗ್‌ ಜೋಡಿ, ಬಿರುಸಿನ ಸ್ಮ್ಯಾಷ್‌, ಆಕರ್ಷಕ ರಿಟರ್ನ್‌ ಮತ್ತು ಡ್ರಾಪ್‌ಶಾಟ್‌ಗಳ ಮೂಲಕ ಎದುರಾಳಿ ಆಟಗಾರರನ್ನು ನಿಬ್ಬೆರಗಾಗಿಸಿದರು. ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲಿ ಮಲಗಿ ಸಂಭ್ರಮಿಸಿದರು. ರ‍್ಯಾಕೆಟ್‌ ಅನ್ನು ಪ್ರೇಕ್ಷಕರತ್ತ ಎಸೆದ ಅವರು, ಅಂಗಣದಲ್ಲಿ ಕುಣಿದಾಡಿದರು.

2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ, 2022ರ ಥಾಮಸ್‌ ಕಪ್‌ ‍ಪ್ರಶಸ್ತಿ, 2022ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿರುವ ಈ ಜೋಡಿ ಇಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿತು. ಪ್ರಸ್ತುತ ವರ್ಷ ಅದ್ಭುತ ಲಯದಲ್ಲಿರುವ ಸಾತ್ವಿಕ್‌– ಚಿರಾಗ್‌ ಅವರು ಏಷ್ಯಾ ಚಾಂಪಿಯನ್‌ಷಿಪ್‌, ಇಂಡೊನೇಷ್ಯಾ ಓಪನ್‌ 1000 ಟೂರ್ನಿ, ಕೊರಿಯಾ ಸೂಪರ್ 500 ಟೂರ್ನಿ ಮತ್ತು ಸ್ವಿಸ್ ಓಪನ್ ಸೂಪರ್ 300 ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಸರ್ವಶ್ರೇಷ್ಠ ಸಾಧನೆ...

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಸರ್ವಶ್ರೇಷ್ಠ ಸಾಧನೆ ಇದಾಗಿದೆ. ಈ ಬಾರಿ ಭಾರತ ಮೂರು ಪದಕಗಳನ್ನು ಜಯಿಸಿವೆ. ಇದರಲ್ಲಿ ಪುರುಷ ಡಬಲ್ಸ್‌‌ನಲ್ಲಿ ಚಿನ್ನ, ಪುರುಷ ತಂಡ ವಿಭಾಗದಲ್ಲಿ ಬೆಳ್ಳಿ ಮತ್ತು ಪುರುಷ ಸಿಂಗಲ್ಸ್‌ನಲ್ಲಿ ಕಂಚಿನ ಪದಕಗಳು ಸೇರಿವೆ.

2018ರ ಜಕರ್ತಾ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಜಯಿಸಿತ್ತು. 1982ರ ಆವೃತ್ತಿಯಲ್ಲಿ ಐದು ಕಂಚಿನ ಪದಕಗಳನ್ನು ಗೆದ್ದಿತ್ತು.

ಈ ಗೆಲುವಿನೊಂದಿಗೆ ಭಾರತದ ಸಾತ್ವಿಕ್-ಚಿರಾಗ್ ಜೋಡಿ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ಜೋಡಿ ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತ್ತು. 58 ವರ್ಷಗಳ ಬಳಿಕ ಭಾರತಕ್ಕೆ ಪದಕ ಒಲಿದಿತ್ತು.

ಸಾತ್ವಿಕ್-ಚಿರಾಗ್ ಪ್ರಸಕ್ತ ಸಾಲಿನಲ್ಲೇ ಇಂಡೋನೇಷ್ಯಾ ಸೂಪರ್ 1000, ಕೊರಿಯಾ ಸೂಪರ್ 500, ಸ್ವಿಸ್ ಓಪನ್ ಸೂಪರ್ 200 ಟೂರ್ನಿಗಳಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT