ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಿಂಧುಗೆ ಸೋಲು

Last Updated 5 ಆಗಸ್ಟ್ 2018, 17:51 IST
ಅಕ್ಷರ ಗಾತ್ರ

ನಾನ್‌ಜಿಂಗ್‌, ಚೀನಾ : ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಭಾರತದ ಪಿ.ವಿ.ಸಿಂಧು ಅವರಿಗೆ ಮತ್ತೊಮ್ಮೆ ನಿರಾಸೆ ಕಾಡಿತು. ಪ್ರಶಸ್ತಿ ಗೆಲ್ಲುವ ಅವರ ಕನಸನ್ನು ಸ್ಪೇನ್‌ನ ಕರೊಲಿನಾ ಮರಿನ್ ಭಗ್ನಗೊಳಿಸಿದರು. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಹಣಾಹಣಿಯಲ್ಲಿ ಕರೊಲಿನಾಗೆ ಸಿಂಧು ಸುಲಭವಾಗಿ ಮಣಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಪಿ.ವಿ.ಸಿಂಧು ಅವರ ಆಟ ಏಳನೇ ಸ್ಥಾನದಲ್ಲಿರುವ ಮರಿನ್‌ಗೆ ಸಾಟಿಯಾಗಲೇ ಇಲ್ಲ. ಮೊದಲ ಗೇಮ್‌ನ ಆರಂಭದಲ್ಲಿ ಕರೊಲಿನಾಗೆ ಉತ್ತಮ ‍‍ಪೈಪೋಟಿ ನೀಡಿ ಪಾಯಿಂಟ್‌ಗಳನ್ನು ಕಲೆ ಹಾಕಿದ ಸಿಂಧು ನಂತರ ಎಡವಿದರು. ನಿಧಾನವಾಗಿ ಲಯ ಕಂಡುಕೊಂಡ ಕರೊಲಿನಾ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದರು. ವಿಜಯದುಂದುಭಿ ಮೊಳಗಿಸಲು ಅವರು ತೆಗೆದುಕೊಂಡದ್ದು 45 ನಿಮಿಷ ಮಾತ್ರ.

2016ರ ರಿಯೊ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಕರೊಲಿನಾಗೆ ಮಣಿದಿದ್ದ ಸಿಂಧು ಆ ಸೋಲಿಗೆ ಸೇಡು ತೀರಿಸಿಕೊಳ್ಳುವರು ಎಂಬ ಭರವಸೆ ಮೂಡಿತ್ತು. ಆದರೆ ಚುರುಕು ಮತ್ತು ತಂತ್ರಗಳು ಮೇಳೈಸಿದ್ದ ಕರೊಲಿನಾ ಆಟ ಸಿಂಧು ಅವರನ್ನು ದಂಗುಬಡಿಸಿತು.

ಪಂದ್ಯದ ಆರಂಭದಲ್ಲಿ ಸಿಂಧು 1–3ರ ಹಿನ್ನಡೆಗೆ ಒಳಗಾಗಿದ್ದರು. ನಂತರ ಚೇತರಿಸಿಕೊಂಡು 4–3ರಿಂದ ಮುನ್ನಡೆದರು. ಅಮೋಘ ಡ್ರಾಪ್‌ಗಳ ಮೂಲಕ ಈ ಮುನ್ನಡೆಯನ್ನು 6–4ಕ್ಕೆ ಏರಿಸಿದರು. ಈ ಸಂದರ್ಭದಲ್ಲಿ ರಣತಂತ್ರಗಳನ್ನು ಬದಲಿಸಿದ ಎಡಗೈ ಆಟಗಾರ್ತಿ ಕರೊಲಿನಾ, ನೆಟ್‌ ಬಳಿ ಶಾಟ್‌ಗಳನ್ನು ಹಾಕಿ ಪಾಯಿಂಟ್ ಗಳಿಸಲು ಯತ್ನಿಸಿದರು.

ಆದರೆ ಅವರು ಎಸಗಿದ ಸ್ವಯಂಕೃತ ತಪ್ಪುಗಳು 8–11ರ ಹಿನ್ನಡೆಗೆ ಕಾರಣವಾದವು. ಇದರ ಲಾಭ ಪಡೆದುಕೊಂಡ ಸಿಂಧು 15–11ರಿಂದ ಎದುರಾಳಿಯನ್ನು ಹಿಂದಿಕ್ಕಿ ಗೇಮ್‌ ಗೆಲ್ಲುವ ಹಾದಿಯಲ್ಲಿ ಹೆಜ್ಜೆ ಇರಿಸಿದರು. ಆದರೆ ಎರಡು ಬಾರಿ ಷಟಲ್‌ ಅನ್ನು ನೆಟ್‌ಗೆ ಹಾಕಿದ ಅವರು ಒಂದು ಶಾಟ್‌ ಅನ್ನು ಹೊರಗೆ ಹೊಡೆದರು. ಮುಂದಿನ ಸರ್ವ್‌ನಲ್ಲಿ ಬಲಶಾಲಿ ಸ್ಮ್ಯಾಷ್‌ ಮೂಲಕ ಕರೊಲಿನಾ 15–15ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಇಬ್ಬರೂ ಪ್ರಬಲ ಪೈಪೋಟಿ ನಡೆಸಿದರು. ಕೊನೆಗೆ ಕರೊಲಿನಾ ಗೆದ್ದು ಸಂಭ್ರಮಿಸಿದರು.

ಆಕ್ರಮಣಕಾರಿ ಆಟ:ಕರೊಲಿನಾ ಎರಡನೇ ಗೇಮ್‌ನ ಆರಂಭದಲ್ಲೇ ಆಕ್ರಮಣಕ್ಕೆ ಮುಂದಾದರು. ಹೀಗಾಗಿ 5–0ಯಿಂದ ಮುನ್ನಡೆದರು. ತೀವ್ರ ಒತ್ತಡಕ್ಕೆ ಒಳಗಾದ ಸಿಂಧು ನಿರಂತರ ಪಾಯಿಂಟ್‌ ಕಳೆದುಕೊಂಡರು. ವಿರಾಮಕ್ಕೆ ತೆರಳುವಾಗ ಅವರ ಖಾತೆಯಲ್ಲಿದ್ದದ್ದು ಎರಡು ಪಾಯಿಂಟ್ ಮಾತ್ರ. ನಂತರವೂ ಸಿಂಧು ಮೇಲೆ ಒತ್ತಡ ಮುಂದುವರಿಸಲು ಕರೊಲಿನಾ ಯಶಸ್ವಿಯಾದರು. ಕೊನೆಯಲ್ಲಿ ಪಾಯಿಂಟ್ ಗಳಿಕೆಯನ್ನು ಎರಡಂಕಿ ದಾಟಿಸುವಲ್ಲಿ ಯಶಸ್ವಿಯಾದರೂ ಜಯದ ಬಳಿ ಸುಳಿಯುವುದಕ್ಕೂ ಸಿಂಧುಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT