ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ಗೆ ಸೌರಭ್ ವರ್ಮಾ

ರಷ್ಯಾ ಓಪನ್‌ ಟೂರ್ನಿ: ಮಿಥುನ್‌ ಮಂಜುನಾಥ್‌ಗೆ ನಿರಾಸೆ
Last Updated 28 ಜುಲೈ 2018, 17:20 IST
ಅಕ್ಷರ ಗಾತ್ರ

ವ್ಲಾಡಿವೊಸ್ಟೋಕ್‌, ರಷ್ಯಾ: ಭಾರತದ ಸೌರಭ್‌ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ರಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಹಂತ ಪ್ರವೇಶಿಸಿದ್ದಾರೆ. ಇವರೊಂದಿಗೆ ರೋಹನ್‌ ಕಪೂರ್‌ ಹಾಗೂ ಕುಹೂ ಗಾರ್ಗ್‌ ಜೋಡಿಯು ಅಂತಿಮ ಘಟ್ಟ ತಲುಪಿದೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸೌರಭ್‌, ಭಾರತದವರೇ ಆದ ಮಿಥುನ್‌ ಮಂಜುನಾಥ್‌ ಅವರನ್ನು 21–9, 21–15ರಿಂದ ಮಣಿಸಿದರು. ಸೌರಭ್‌, ಫೈನಲ್‌ನಲ್ಲಿ ಜಪಾನ್‌ನ ಕೊಕೊ ವಟನಾಬೆ ಅವರನ್ನು ಎದುರಿಸಲಿದ್ದಾರೆ.

ಪಂಂದ್ಯದಲ್ಲಿ ಸೌರಭ್‌ ಅವರು ಉತ್ತಮ ಆರಂಭ ಮಾಡಿದರು. ಅವರ ಆಕ್ರಮಣಕಾರಿ ಆಟಕ್ಕೆ ಮಿಥುನ್‌ ಪ್ರತ್ಯುತ್ತರ ನೀಡಲು ವಿಫಲವಾದರು. ಸೌರಭ್‌, ವಿರಾಮದ ವೇಳೆ ಮೊದಲ ಗೇಮ್‌ನಲ್ಲಿ 11–5ರ ಮುನ್ನಡೆಯ ಸಾಧಿಸಿದ್ದರು.

ವಿರಾಮದ ನಂತರ ಅವರ ಆಟ ರಂಗೇರಿತು. ಮನಮೋಹಕ ಸ್ಮ್ಯಾಷ್‌ಗಳಿಂದ ಎದುರಾಳಿಯನ್ನು ಅವರು ಕಟ್ಟಿಹಾಕಿದರು. ಪ್ರತಿತಂತ್ರ ಹೆಣೆಯಲು ವಿಫಲವಾದ ಮಿಥುನ್‌ ಸುಲಭವಾಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟರು.

ಎರಡನೇ ಗೇಮ್‌ನಲ್ಲಿ ಮಿಥುನ್‌ ಎದುರಾಳಿಗೆ ಪೈಪೋಟಿ ನೀಡಿದರು. ವಿರಾಮಕ್ಕೂ ಮುನ್ನಅವರು 11–10ರ ಮುನ್ನಡೆ ಗಳಿಸಿದ್ದರು. ಆದರೆ, ವಿರಾಮದ ನಂತರ ಮತ್ತೆ ಚುರುಕಿನ ಆಟದ ಲಯಕ್ಕೆ ಮರಳಿದ ಸೌರಭ್‌ ಪಾಯಿಂಟ್ಸ್‌ ಕಲೆಹಾಕಿ ಮುನ್ನಡೆ ಹೊಂದಿದರು. ಇದೇ ವೇಳೆ ಹಲವು ತಪ್ಪುಗಳನ್ನು ಮಾಡಿದ ಮಿಥುನ್‌ ಸುಲಭವಾಗಿ ಎದುರಾಳಿಗೆ ‍ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಇದರ ಲಾಭ ‍ಪಡೆದ ಸೌರಭ್‌, ಗೆಲುವಿನ ನಗೆ ಬೀರಿದರು.

ಮಿಶ್ರ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ರೋಹನ್‌ ಕಪೂರ್‌ ಹಾಗೂ ಕುಹೂ ಗಾರ್ಗ್‌ ಜೋಡಿಯು 21–19, 11–21, 22–20ರಿಂದ ಮಲೇಷ್ಯಾದ ಚೆನ್‌ ಟಾಂಗ್‌ ಜೀ ಹಾಗೂ ಯೆನ್‌ ವೀ ಪೆಕ್‌ ಜೋಡಿಯ ವಿರುದ್ಧ ಜಯಿಸಿತು.

ಅಂತಿಮ ಹಣಾಹಣಿಯಲ್ಲಿ ಭಾರತದ ಜೋಡಿಯು ರಷ್ಯಾದ ವ್ಲಾದಿಮಿರ್‌ಇವಾನೊವ್‌ ಹಾಗೂ ದಕ್ಷಿಣ ಕೊರಿಯಾದ ಮಿನ್‌ ಕ್ಯುಂಗ್‌ ಕಿಮ್‌ ಜೋಡಿಯೊಂದಿಗೆ ಸೆಣಸಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅರುಣ್‌ ಜಾರ್ಜ್‌ ಹಾಗೂ ಸನ್ಯಮ್‌ ಶುಕ್ಲಾ ಜೋಡಿಯು ನಿರಾಸೆ ಅನುಭವಿಸಿತು. ಈ ಜೋಡಿಯು 15–21, 19–21ರಿಂದ ಸ್ಥಳೀಯ ಕಾನ್‌ಸ್ಟಂಟೀನ್‌ ಅಬ್ರಾಮೊವ್‌ ಹಾಗೂ ಅಲೆಕ್ಸಾಂಡರ್‌ ಜಿಂಚೆಂಕೊ ಅವರ ವಿರುದ್ದ ಪರಾಭವಗೊಂಡಿತು.

ಮುಖ್ಯಾಂಶಗಳು

*ಅಂತಿಮ ಹಣಾಹಣಿಯಲ್ಲಿ ರೋಹನ್‌ ಕಪೂರ್‌ ಹಾಗೂ ಕುಹೂ ಗಾರ್ಗ್‌ ಜೋಡಿಯು ರಷ್ಯಾದ ವ್ಲಾದಿಮಿರ್‌ಇವಾನೊವ್‌ ಹಾಗೂ ದಕ್ಷಿಣ ಕೊರಿಯಾದ ಮಿನ್‌ ಕ್ಯುಂಗ್‌ ಕಿಮ್‌ ಜೋಡಿಯೊಂದಿಗೆ ಸೆಣಸಲಿದೆ.

*ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅರುಣ್‌ ಜಾರ್ಜ್‌, ಸನ್ಯಾಮ್‌ ಶುಕ್ಲಾ ಜೋಡಿಯು 15–21, 19–21ರಿಂದ ಸ್ಥಳೀಯ ಕಾನ್‌ಸ್ಟಂಟೀನ್‌ ಅಬ್ರಾಮೊವ್‌ ಹಾಗೂ ಅಲೆಕ್ಸಾಂಡರ್‌ ಜಿಂಚೆಂಕೊ ಜೋಡಿಯ ವಿರುದ್ದ ಸೋತಿತು.

*ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ರಿತುಪರ್ಣಾ ದಾಸ್‌, ವೃಶಾಲಿ ಗುಮ್ಮಾಡಿ ಶುಕ್ರವಾರ ಮಣಿದಿದ್ದರು. ಇವರೊಂದಿಗೆ ಮಿಶ್ರ ಡಬಲ್ಸ್‌ ವಿಭಾಗದಕ್ವಾರ್ಟರ್‌ಫೈನಲ್‌ನಲ್ಲಿ ಸೌರಭ್‌ ವರ್ಮಾ ಹಾಗೂ ಅನುಷ್ಕಾ ಪಾರಿಖ್‌ ಜೋಡಿಯು ಪರಾಭವಗೊಂಡಿತ್ತು.

*ಪ್ರಶಸ್ತಿ ಮೊತ್ತ – ₹51.46 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT