ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕುಸ್ತಿ ಫೆಡರೇಷನ್ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

Published 24 ಡಿಸೆಂಬರ್ 2023, 6:47 IST
Last Updated 24 ಡಿಸೆಂಬರ್ 2023, 16:48 IST
ಅಕ್ಷರ ಗಾತ್ರ

ನವದೆಹಲಿ: ಮೂರು ದಿನಗಳ ಹಿಂದಷ್ಟೇ ಚುನಾಯಿತಗೊಂಡಿದ್ದ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಆಡಳಿತ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯವು ಭಾನುವಾರ ಅಮಾನತುಗೊಳಿಸಿದೆ.

15 ಮತ್ತು 19 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ದಿನಾಂಕ ಘೋಷಣೆ ಮಾಡಿದ್ದ ಸಮಿತಿಯ ಕ್ರಮವು ನಿಯಮಬಾಹಿರವಾಗಿದೆ ಎಂದಿರುವ ಸಚಿವಾಲಯವು ಈ ಕ್ರಮ ಕೈಗೊಂಡಿದೆ. ಮುಂದಿನ ಆದೇಶದವರೆಗೆ ಎಲ್ಲಾ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲು ಡಬ್ಲ್ಯುಎಫ್ಐಗೆ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

‌ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಎನ್ನಲಾಗಿರುವ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾದ
ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಗುರುವಾರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ್‌ ಸಿಂಗ್ ಅವರು ನಿಕಟಪೂರ್ವ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ಈ ತಿಂಗಳ ಅಂತ್ಯದಲ್ಲಿ ರಾಷ್ಟ್ರೀಯ ಜೂನಿಯರ್‌ ಕುಸ್ತಿ ಚಾಂಪಿಯನ್‌ಶಿಪ್‌ ನಡೆಸಲಾಗುವುದು ಎಂದು ಘೋಷಿಸಿದ್ದರು. 

‘ಹೊಸ ಮಂಡಳಿಯು ಮಾಜಿ ಪದಾಧಿಕಾರಿಗಳ (ಬ್ರಿಜ್‌ ಭೂಷಣ್ ಶರಣ್ ಸಿಂಗ್‌) ಸಂಪೂರ್ಣ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ಕ್ರೀಡಾ ಸಂಹಿತೆಗೆ ಅನುಗುಣವಾಗಿಲ್ಲ’ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಹೇಳಿದೆ.  

ಜನವರಿಯಲ್ಲಿ ಆರೋಪಗಳು ಬೆಳಕಿಗೆ ಬಂದ ನಂತರ ಬ್ರಿಜ್ ಭೂಷಣ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ದೇಶದ ಹಲವು ಕುಸ್ತಿಪಟುಗಳು ಧರಣಿ ನಡೆಸಿದ್ದರು. ಬ್ರಿಜ್ ಭೂಷಣ್‌ ಮೇಲೆ ಇರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.

ಅಡ್‌ಹಾಕ್‌ ಸಮಿತಿ: ಐಒಎಗೆ ಮನವಿ

ನವದೆಹಲಿ (ಪಿಟಿಐ): ಭಾರತ ಕುಸ್ತಿ ಫೆಡರೇಷನ್‌ನ ಹೊಸ ಆಡಳಿತ ಮಂಡಳಿ ಅಮಾನತುಗೊಂಡ ಬೆನ್ನಲ್ಲೇ ಕ್ರೀಡಾ ಸಚಿವಾಲಯವು ಭಾನುವಾರ ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಡಬ್ಲ್ಯುಎಫ್ಐ ವ್ಯವಹಾರ ನಿರ್ವಹಣೆಗೆ ಅಡ್‌ಹಾಕ್‌ (ತಾತ್ಕಾಲಿಕ) ಸಮಿತಿ ರಚಿಸುವಂತೆ ಕೇಳಿದೆ. ಆದಷ್ಟು ಬೇಗ ಸಮಿತಿ ರಚಿಸುವಂತೆ ಸಚಿವಾಲಯವು ಐಒಎಗೆ ಪತ್ರ ಬರೆದಿದೆ.

‘ಡಬ್ಲ್ಯುಎಫ್ಐನ ಮಾಜಿ ಪದಾಧಿಕಾರಿಗಳ ಪ್ರಭಾವ ಮತ್ತು ನಿಯಂತ್ರಣ
ದಿಂದ ಉದ್ಭವಿಸುವ ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ, ಡಬ್ಲ್ಯುಎಫ್ಐನ ಆಡಳಿತ ಮತ್ತು ಸಮಗ್ರತೆ ಬಗ್ಗೆ ಗಂಭೀರ ಕಳವಳಗಳು ಹುಟ್ಟಿಕೊಂಡಿವೆ’ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತರುಣ್ ಪಾರಿಕ್ ಅವರು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

‘ಕ್ರೀಡಾ ಸಂಸ್ಥೆಗಳಲ್ಲಿ ಉತ್ತಮ ಆಡಳಿತದ ತತ್ವ ಎತ್ತಿಹಿಡಿಯಲು ತಕ್ಷಣದ ಕ್ರಮಗಳ ಅಗತ್ಯವಿದೆ. ಆದ್ದರಿಂದ, ಕುಸ್ತಿಪಟುಗಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸದಂತೆ ಮತ್ತು ಕ್ರೀಡಾ ಸಂಸ್ಥೆಯಲ್ಲಿ ಉತ್ತಮ ಆಡಳಿತದ ತತ್ವಕ್ಕೆ ಧಕ್ಕೆಯಾಗದಂತೆ ಡಬ್ಲ್ಯುಎಫ್ಐನ ವ್ಯವಹಾರಗಳನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡುವುದು ಈಗ ಐಒಎ ಕರ್ತವ್ಯವಾಗಿದೆ’ ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಬರೆದ ಪತ್ರದಲ್ಲಿ  ತರುಣ್ ತಿಳಿಸಿದ್ದಾರೆ.

ನಿರ್ಧಾರ ತೆಗೆದುಕೊಳ್ಳುವಾಗ ನಿಯಮಗಳನ್ನು ಉಲ್ಲಂಘಿಸಿಲ್ಲ. ಹಾಗಾಗಿ ಅಮಾನತು ಆದೇಶ ವಾಪಸ್ ಪಡೆಯುವಂತೆ ಸರ್ಕಾರವನ್ನು ಕೋರುತ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟ್‌ ಮೊರೆ ಹೋಗುತ್ತೇವೆ
ಸಂಜಯ್ ಸಿಂಗ್, ಡಬ್ಲ್ಯುಎಫ್‌ಐನ ಅಮಾನತಾದ ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT