ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್‌ ಓಪನ್ ಬ್ಯಾಡ್ಮಿಂಟನ್: ಲಕ್ಷ್ಯ, ಶ್ರೀಕಾಂತ್‌ ಮುನ್ನಡೆ

Published 20 ಮಾರ್ಚ್ 2024, 16:06 IST
Last Updated 20 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಬಾಸೆಲ್ (ಸ್ವಿಜರ್ಲೆಂಡ್‌): ಮಾಜಿ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಮತ್ತು ಉತ್ತಮ ಲಯದಲ್ಲಿರುವ ಲಕ್ಷ್ಯ ಸೇನ್ ಅವರು ಬುಧವಾರ ಸ್ಫೂರ್ತಿಯುತ ಪ್ರದರ್ಶನ ನೀಡಿ, ಸ್ವಿಸ್‌ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಎರಡನೆ ಸುತ್ತಿಗೆ ಮುನ್ನಡೆದರು.

2015ರಲ್ಲಿ ಇಲ್ಲಿ ವಿಜೇತರಾಗಿದ್ದ ಶ್ರೀಕಾಂತ್ 21–17, 21–18 ರಿಂದ 24ನೇ ಕ್ರಮಾಂಕದ ವಾಂಗ್‌ ತ್ಜು ವೀ (ಚೀನಾ ತೈಪಿ) ಅವರನ್ನು ಸೋಲಿಸಿದರು. ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ ಗೆಲ್ಲಲು ತೆಗೆದುಕೊಂಡಿದ್ದು 43 ನಿಮಿಷಗಳನ್ನು. ಅವರ ಮುಂದಿನ ಎದುರಾಳಿ ಮಲೇಷ್ಯಾದ ಅಗ್ರಮಾನ್ಯ ಆಟಗಾರ ಲೀ ಝೀ ಜಿಯಾ.

ಎರಡು ವಾರ ಅವಧಿಯಲ್ಲಿ ಫ್ರೆಂಚ್‌ ಓಪನ್ ಮತ್ತು ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಲಕ್ಷ್ಯ ಸೇನ್ 21–19, 15–21, 21–11 ರಿಂದ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರ ಎದುರಾಳಿ ಚೀನಾ ತೈಪೆಯ ಚಿಯಾ ಹಾವೊ ಲೀ.

ತನಿಶಾ–ಅಶ್ವಿನಿ ಮುನ್ನಡೆ:

ಮಹಿಳಾ ಡಬಲ್ಸ್‌ನಲ್ಲಿ ಆರನೇ ಶ್ರೇಯಾಂಕದ ತನಿಶಾ ಕ್ರ್ಯಾಸ್ಟೊ– ಅಶ್ವಿನಿ ಪೊನ್ನಪ್ಪ ಜೋಡಿ ತೀವ್ರ  ಹೋರಾಟದ ನಂತರ 21–18, 12–21, 21–19 ರಿಂದ ಮೀಲಿಸಾ ತ್ರಿಯಾಸ್‌ ಪುಸ್ಪಿತಾಸರಿ– ರಚೆಲ್ ಎ.ರೋಸ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತನ್ನು ತಲುಪಿತು. ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿಯರು ಮುಂದಿನ ಸುತ್ತಿನಲ್ಲಿ ಜಪಾನ್‌ನ ರುಯಿ ಹಿರೊಕಮಿ–ಯುನಾ ಕಟೊ ಅವರನ್ನು ಎದುರಿಸಲಿದ್ದಾರೆ.

ಭಾರತದ ಪ್ರಿಯಾ ಕೊಂಜೆಂಗ್‌ಬಾಮ್‌– ಶ್ರುತಿ ಮಿಶ್ರಾ ಜೋಡಿ 21–13, 21–19 ರಿಂದ ಚೀನಾ ತೈಪಿಯ ಹುವಾಂಗ್ ಯು ಸುನ್ –ಲಿಯಾಂಗ್ ಜೋಡಿಯನ್ನು ಸೋಲಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು 21–15, 21–12ರಲ್ಲಿ ಅಮೆರಿಕದ ಆ್ಯನಿ ಕ್ಸು ಮತ್ತು ಕೆರಿ ಕ್ಸು ಅವರನ್ನು ಸೋಲಿಸಿದ್ದರು.

ಭಾರತದ ಇತರ ಮೂರು ಜೋಡಿಗಳು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದವು. ಅಶ್ವಿನಿ ಭಟ್‌– ಶಿಖಾ ಗೌತಮ್ 13–21, 21–16, 14–21ರಲ್ಲಿ ನಾಲ್ಕನೇ ಶ್ರೇಯಾಂಕದ ಯುಂಗ್‌ ನ್ಗ ಟಿಂಗ್– ಯುಂಗ್‌ ಪುಯಿ ಲಾಮ್ (ಹಾಂಗ್‌ಕಾಂಗ್‌) ಅವರಿಗೆ ಮಣಿದರು. ರುತುಪರ್ಣಾ – ಶ್ವೇತಪರ್ಣಾ ಪಂಡಾ ಜೋಡಿ 4–21, 6–21 ರಲ್ಲಿ ಅಗ್ರ ಶ್ರೇಯಾಂಕದ ಅಪ್ರಿಯಾನಿ ರಹಾಯು– ಸಿತಿ ಫದಿಯಾ ಸಿಲ್ವ ರಾಮಧಾಂತಿ (ಇಂಡೊನೇಷ್ಯಾ) ಅವರಿಗೆ ಮಣಿಯಿತು.

ಸಿಮ್ರಾನ್‌ ಸಿಂಘಿ– ರಿತಿಕಾ ಠಕ್ಕಟರ್ ಜೋಡಿ 17–21, 7–21 ರಲ್ಲಿ ಇಂಡೊನೇಷ್ಯಾದ ಟ್ರಿಯಾ ಮಯಸಾರಿ– ರಿಬ್ಕಾ ಸುಗಿಯಾರ್ತೊ ಜೋಡಿ ಎದುರು ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT