ಟೋಕಿಯೊ: ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಆಕರ್ಷಿ ಕಶ್ಯಪ್‌ಗೆ ಮೊದಲ ಸುತ್ತಿನಲ್ಲಿ ನಿರಾಸೆ ಎದುರಾಯಿತು.
ಯೊಯೊಗಿ ನ್ಯಾಷನಲ್ ಜಿಮ್ನೇಶಿಯಂನಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್ 21–13, 21–13 ರಿಂದ ತೈವಾನ್‌ನ ಚೌ ತಿಯೆನ್–ಚೆನ್ ವಿರುದ್ಧ ಗೆದ್ದರು.
ಪ್ರಣಯ್ 21–17, 21–13 ರಿಂದ ಚೀನಾದ ಲಿ ಶಿಫೆಂಗ್ ಅವರನ್ನು ಮಣಿಸಿದರು. ಆದರೆ ಮುಂದಿನ ಸುತ್ತಿನಲ್ಲಿ ಇವರಿಬ್ಬರು ಪರಸ್ಪರ ಎದುರಾಗಲಿದ್ದು, ಒಬ್ಬರು ಕ್ವಾರ್ಟರ್ ಫೈನಲ್ ಕಾಣದೆಯೇ ಹೊರಬೀಳಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರ ಸವಾಲು ಮೀರಿನಿಲ್ಲಲು ವಿಫಲವಾದ ಆಕರ್ಷಿ 17–21, 17–21 ರಿಂದ ಸೋತರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ, ಜಪಾನ್‌ನ ಸಯಕಾ ಹೊಬರ– ಸುಯಿಜು ಅವರನ್ನು ಪರಾಭವಗೊಳಿಸಿತು. ಭಾರತದ ಜೋಡಿ ಮೊದಲ ಗೇಮ್‌ಅನ್ನು 11–21 ರಿಂದ ಸೋತರೂ ಮುಂದಿನ ಎರಡು ಗೇಮ್‌ಗಳನ್ನು 21–15, 21–14 ರಿಂದ ಗೆದ್ದು 16ರ ಘಟ್ಟಕ್ಕೆ ಮುನ್ನಡೆಯಿತು.
ಮಿಶ್ರ ಡಬಲ್ಸ್‌ನಲ್ಲಿ ಮೊದಲ ಗೇಮ್ ಗೆದ್ದರೂ, ಅದರ ಲಾಭ ತಮ್ಮದಾಗಿಸಿಕೊಳ್ಳಲು ವಿಫಲವಾದ ರೋಹನ್ ಕಪೂರ್– ಸಿಕ್ಕಿ ರೆಡ್ಡಿ ಅವರು 21–18, 9–21, 18–21 ರಿಂದ ತೈವಾನ್‌ನ ಯೆ ಹಾಂಗ್ ವೀ– ಲೀ ಚಿಯಾ ಸಿನ್ ಎದುರು ಮಣಿದರು.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅವರು ಬುಧವಾರ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಎರಡನೇ ಸ್ಥಾನಕ್ಕೇರಿದ ಸಾತ್ವಿಕ್– ಚಿರಾಗ್
ಡಬಲ್ಸ್ ವಿಭಾಗದಲ್ಲಿ ಮಿಂಚುತ್ತಿರುವ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ರ್‍ಯಾಂಕ್ ಆಗಿದೆ. ಭಾರತದ ಜೋಡಿ ಚೀನಾದ ಲಿಯಾಂಗ್ ವೀ ಕೆಂಗ್– ವಾಂಗ್ ಚಾಂಗ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿತು. ಇಂಡೊನೇಷ್ಯಾದ ಫಜರ್ ಅಲ್‌ಫಿಯಾನ್– ಮುಹಮ್ಮದ್ ರಿಯಾನ್ ಅರ್ಡಿಯಾಂತೊ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.