ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಮೇಳೈಸಿದ ಸೂಪರ್ ಟ್ಯಾಕಲ್‌; ಪಲ್ಟನ್ಸ್‌ಗೆ ಜಯ

Last Updated 30 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಅಮೋಘ ಟ್ಯಾಕ್ಲಿಂಗ್ ಸಾಮರ್ಥ್ಯ ಮೆರೆದರೂ ತೆಲುಗು ಟೈಟನ್ಸ್‌ಗೆ ಜಯದ ಸವಿ ಸಿಗಲಿಲ್ಲ. ತ್ಯಾಗರಾಜ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಟೈಟನ್ಸ್ ವಿರುದ್ಧ ಪುಣೇರಿ ಪಲ್ಟನ್ 34–27ರಲ್ಲಿ ಜಯ ಗಳಿಸಿತು.

ಆರಂಭದಲ್ಲೇ ಸೂಪರ್ ಟ್ಯಾಕಲ್‌ಗಳು ಮೇಳೈಸಿದ್ದರಿಂದ ಪಂದ್ಯ ರೋಚಕವಾಯಿತು. ಮೂರನೇ ನಿಮಿಷದಲ್ಲಿ ಪಲ್ಟನ್‌ನ ನಿತಿನ್ ತೋಮರ್‌ ಅವರನ್ನು ವಿಶಾಲ್ ಭಾರದ್ವಾಜ್ ‘ಸೂಪರ್ ಟ್ಯಾಕಲ್‌’ನಲ್ಲಿ ಕೆಡವಿದರು. ನಾಲ್ಕನೇ ನಿಮಿಷದಲ್ಲಿ ಪಲ್ಟನ್‌ನ ಮಂಜೀತ್ ಅವರನ್ನು ಸಿ.ಅರುಣ್ ‘ಸೂಪರ್ ಟ್ಯಾಕಲ್’ ಮಾಡಿದರು.

7ನೇ ನಿಮಿಷದಲ್ಲಿ ನಿತಿನ್ ತೋಮರ್ ಮತ್ತೊಮ್ಮೆ ಸೂಪರ್ ಟ್ಯಾಕಲ್‌ಗೆ ಒಳಗಾದರು. ಅಬೋಜರ್ ಮಿಗಾನಿ ಅವರ ಮಿಂಚಿನ ಟ್ಯಾಕ್ಲಿಂಗ್‌, ಟೈಟನ್ಸ್‌ಗೆ 7–7ರ ಸಮಬಲ ಗಳಿಸಿಕೊಟ್ಟಿತು. 9ನೇ ನಿಮಿಷದಲ್ಲಿ ಪಲ್ಟನ್‌ನ ಅಮಿತ್ ಕುಮಾರ್ ಮತ್ತು ಮಂಜೀತ್ ಕೂಡ ಸೂಪರ್ ಟ್ಯಾಕಲ್‌ಗೆ ಬಲಿಯಾದರು. ಈ ಮೂಲಕ ಟೈಟನ್ಸ್‌ ಮುನ್ನಡೆ ಸಾಧಿಸಿತು. 18ನೇ ನಿಮಿಷದಲ್ಲಿ ತಿರುಗೇಟು ನೀಡಿದ ಪಲ್ಟನ್‌ 13–13ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ ಮುನ್ನಡೆಯನ್ನೂ ಸಾಧಿಸಿತು. ಹೀಗಾಗಿ ಮೊದಲಾರ್ಧದ ಮುಕ್ತಾಯಕ್ಕೆ ತಂಡದ ಸ್ಕೋರ್‌ 17–14 ಆಯಿತು.

ಮಂಜೀತ್‌, ತೋಮರ್ ಚುರುಕಿನ ಆಟ: ದ್ವಿತೀಯಾರ್ಧದ ಆರಂಭದಲ್ಲಿ ಮಂಜೀತ್ ಮತ್ತು ನಿತಿನ್ ತೋಮರ್ ಸತತವಾಗಿ ಪಾಯಿಂಟ್‌ಗಳನ್ನು ಹೆಕ್ಕಿ ತಂದರು. ಹೀಗಾಗಿ ತಂಡದ ಮುನ್ನಡೆ ಹಿಗ್ಗುತ್ತ ಸಾಗಿತು. ಈ ಲಯವನ್ನು ಸತತವಾಗಿ ಉಳಿಸಿಕೊಂಡ ತಂಡ ಗೆಲುವಿನ ಕೇಕೆ ಹಾಕಿತು.

ತೆಲುಗು ಒಟ್ಟು 17 ಟ್ಯಾಕಲ್ ಪಾಯಿಂಟ್ ಗಳಿಸಿದರೆ ಪಲ್ಟನ್ 15 ರೈಡಿಂಗ್ ಪಾಯಿಂಟ್ ಕಲೆ ಹಾಕಿತು. ಪಲ್ಟನ್‌ಗೆ ಮಂಜೀತ್ ಮತ್ತು ನಿತಿನ್ ಕ್ರಮವಾಗಿ 9 ಮತ್ತು 8 ಪಾಯಿಂಟ್ ತಂದುಕೊಟ್ಟರು. ಟೈಟನ್ಸ್ ಪರ ಸಿದ್ಧಾರ್ಥ್‌ 7 ಮತ್ತು ಸಿ.ಅರುಣ್ 6 ಪಾಯಿಂಟ್‌ ಗಳಿಸಿದರು. ವಿಶಾಲ್ ಭಾರದ್ವಾಜ್ 5 ಟ್ಯಾಕ್ಲಿಂಗ್ ಪಾಯಿಂಟ್ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT