ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸತೀಶ್‌ಗೆ ಸಿಂಗಲ್ಸ್‌ ಕಿರೀಟ

ಕನ್ನಡಿಗ ಆಯುಷ್‌ ಶೆಟ್ಟಿ ರನ್ನರ್‌ ಅಪ್‌
Published 17 ಡಿಸೆಂಬರ್ 2023, 13:40 IST
Last Updated 17 ಡಿಸೆಂಬರ್ 2023, 13:40 IST
ಅಕ್ಷರ ಗಾತ್ರ

ಕಟಕ್‌: ಭಾರತದ ಸತೀಶ್ ಕುಮಾರ್ ಕರುಣಾಕರನ್ ಅವರು ಒಡಿಶಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಅವರು ಫೈನಲ್‌ನಲ್ಲಿ ಸ್ವದೇಶದ ಆಯುಷ್‌ ಶೆಟ್ಟಿ ಅವರನ್ನು ಮಣಿಸಿ ಸೂಪರ್ 100 ಮಟ್ಟದ ಚೊಚ್ಚಲ ಪ್ರಶಸ್ತಿ ಗೆದ್ದರು.

ಭಾನುವಾರ ನಡೆದ ಫೈನಲ್‌ನಲ್ಲಿ 22 ವರ್ಷದ ಸತೀಶ್‌ ಅವರು 21–18, 19–21, 21–14ರಿಂದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ, 18 ವರ್ಷದ ಆಯುಷ್‌ ಅವರನ್ನು ಮಣಿಸಿದರು.

ಒಂದು ಗಂಟೆ ಆರು ನಿಮಿಷ ನಡೆದ ಪಂದ್ಯವೂ ರೋಚಕವಾಗಿತ್ತು. ಮೊದಲ ಗೇಮ್‌ನಲ್ಲಿ ಸತೀಶ್‌ ಮೇಲುಗೈ ಸಾಧಿಸಿದರೆ, ಎರಡನೇ ಗೇಮ್‌ ಅನ್ನು ಆಯುಷ್‌ ಹಿಡಿತ ಸಾಧಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಸತೀಶ್‌ ಪರಾಕ್ರಮ ಮೆರೆದು ಪ್ರಶಸ್ತಿಗೆ ಮುತ್ತಿಕ್ಕಿದರು.

ರನ್ನರ್‌ ಅಪ್‌ ಸ್ಥಾನ ಪಡೆದ ಕನ್ನಡಿಗ ಆಯುಷ್‌ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು ಸಾಣೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

ತನಿಶಾ– ಧ್ರುವ್ ಜೋಡಿಗೆ ಪ್ರಶಸ್ತಿ: ಭಾರತದ ತನಿಶಾ ಕ್ರಾಸ್ಟೊ ಮತ್ತು ಧ್ರುವ್ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಫೈನಲ್‌ನಲ್ಲಿ 20 ವರ್ಷದ ತನಿಶಾ ಹಾಗೂ 23 ವರ್ಷದ ಧ್ರುವ್‌ ಅವರು 17-21, 21-19, 23-21ರಿಂದ ಸಿಂಗಪುರದ ಹೀ ಯಾಂಗ್ ಕೈ ಟೆರ್ರಿ ಮತ್ತು ತಾನ್ ವೀ ಹಾನ್ ಜೆಸ್ಸಿಕಾ ವಿರುದ್ಧ ಗೆಲುವು ಸಾಧಿಸಿದರು. ಒಂದು ಗಂಟೆ 14 ನಿಮಿಷ ನಡೆದ  ‘ಮ್ಯಾರಥಾನ್‘ ಮಾದರಿಯ ಪಂದ್ಯದಲ್ಲಿ ಭಾರತದ ಆಟಗಾರರು ಮೊದಲ ಗೇಮ್‌ ಸೋತರೂ, ನಂತರದ ಹಿಡಿತ ಸಾಧಿಸಿ ಗೆಲುವು ದಕ್ಕಿಸಿಕೊಂಡರು.

ಪುರುಷರ ಡಬಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಭಾರತದ ಕೃಷ್ಣಪ್ರಸಾದ್ ಗರಗ ಮತ್ತು ಸಾಯಿಪ್ರತೀಕ್ ಕೆ. ಜೋಡಿಯು ಫೈನಲ್‌ನಲ್ಲಿ 22–20, 18–21, 17–21ರಿಂದ ಏಳನೇ ಶ್ರೇಯಾಂಕದ ಚೀನಾ ತೈಪೆಯ ಲಿನ್ ಬಿಂಗ್-ವೀ ಮತ್ತು ಸು ಚಿಂಗ್ ಹೆಂಗ್ ಅವರ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆಯಿತು.

ಮಹಿಳೆಯರ ಡಬಲ್ಸ್‌ನ ಫೈನಲ್‌ನಲ್ಲಿ ಭಾರತದ ತನಿಶಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಇಂಡೊನೇಷ್ಯಾದ ಮೈಲಿಸಾ ಟ್ರಿಯಾಸ್ ಪುಷ್ಪಿತಾಸರಿ ಮತ್ತು ರಾಚೆಲ್ ಅಲ್ಲೆಸ್ಯಾ ರೋಸ್ ಜೋಡಿಯನ್ನು ಎದುರಿಸಲಿದೆ.

ಭಾರತದ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ 
ಭಾರತದ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT