ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾತನಹಳ್ಳಿ ಹುಡುಗಿಯ ಯಶೋಗಾಥೆ

Last Updated 5 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ನನ್ನ ಹಳ್ಳಿಯಲ್ಲಿ ಸಂಜೆಯ ಸಮಯ ಕಳೆಯಲು ಅಕ್ಕಪಕ್ಕದ ಮನೆ ಗೆಳತಿ–ಗೆಳೆಯರೊಂದಿಗೆ ಟೆನಿಕಾಯ್ಟ್‌ ಆಡುತ್ತಿದ್ದೆ. ಈಗ ಅದೇ ಆಟ ನನಗೆ ಗೌರವ ತಂದುಕೊಡುತ್ತಿದೆ. ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ...’ -ಹಳ್ಳಿ ಹುಡುಗಿ, ಕ್ರೀಡಾ ಸಾಧಕಿ, ರೈತನ ಮಗಳು ಕೆ.ಆರ್‌.ಹಂಸವೇಣಿ ಮಾತಿದು. ಗ್ರಾಮೀಣ ಕ್ರೀಡೆ ಟೆನಿಕಾಯ್ಟ್‌ ಈ ಹುಡುಗಿಯ ಅದೃಷ್ಟ ಬದಲಾಯಿಸಿದ್ದು, ವಿದೇಶ ದರ್ಶನದ ಭಾಗ್ಯ ದಕ್ಕಿಸಿಕೊಟ್ಟಿದೆ.

ಮಂಡ್ಯ ಜಿಲ್ಲೆಯ ‍ಕ್ಯಾತನಹಳ್ಳಿಯ ಬೀದಿಯಲ್ಲಿ ರಿಂಗ್‌ ಎಸೆಯುತ್ತಾ ಸಂಜೆ ದೂಡುತ್ತಿದ್ದ ಇವರೀಗ ಬೆಲಾರಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆನಿಕಾಯ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದಾರೆ.

ಈ ಖುಷಿಯನ್ನು ಅವರು ಪ್ರವಾಸ ಹೊರಡುವುದಕ್ಕೆ ಮುನ್ನ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

*ಹಳ್ಳಿಯ ಬೀದಿಯಿಂದ ಎಂದೂ ಕಾಣದ ಬೆಲಾರಸ್‌ನತ್ತ ಹೆಜ್ಜೆ. ಹೇಗಿದೆ ಅನುಭವ?
ವಿದೇಶಕ್ಕೆ ಹೋಗುವ ಖುಷಿಗಿಂತ ಹಳ್ಳಿಯ ಜನರೆಲ್ಲಾ ಮನೆಗೆ ಬಂದು ವಿಶ್‌ ಮಾಡಿದ ರೀತಿಗೆ ದಂಗಾದೆ. ನಿತ್ಯ ಗದ್ದೆಯಲ್ಲಿ ದುಡಿದು ಮನೆಗೆ ಬರುವ ಅಪ್ಪನ ಮೊಗದಲ್ಲಿ ಏನೋ ಖುಷಿ. ಅಮ್ಮನಿಗೆ ಹೆಮ್ಮೆ. ಅದಕ್ಕಿಂತ ಸಂತೋಷ ನನಗೆ ಬೇರೆ ಇಲ್ಲ.

*ಅದ್ಸರಿ; ಟೆನಿಕಾಯ್ಟ್‌ ರಿಂಗ್‌ ಹಿಡಿದಿದ್ದು ಏಕೆ?
ಹಳ್ಳಿಯಲ್ಲಿ ಏನು ಮಾಡುವುದು? ರಜೆ ಸಿಕ್ಕರೆ, ಸಂಜೆಯಾದರೆ ನಮಗೆ ಟೆನಿಕಾಯ್ಟ್‌ನ ರಿಂಗೇ ಗತಿ. ಕುಂಟೆ ಬಿಲ್ಲೆ, ಕಬಡ್ಡಿ ಬಿಟ್ಟರೆ ನಮ್ಮೂರಲ್ಲಿ ಈ ಆಟ ತುಂಬಾ ಫೇಮಸ್ಸು. ಈ ಕ್ರೀಡೆಯಲ್ಲಿ ಚೆನ್ನಾಗಿ ಆಡುತ್ತಿದ್ದ ನನ್ನನ್ನು ಗುರುತಿಸಿ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

*ಈ ಆಟಕ್ಕೆ ಸರಿಯಾದ ಬೆಂಬಲವೇ ಇಲ್ಲವಲ್ಲಾ?
ಅದು ನಿಜವೇ.. ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಇಲ್ಲ. ಸಂಘ ಸಂಸ್ಥೆಗಳಿಂದ ಈ ಕ್ರೀಡೆ ಉಳಿದಿದೆ. ಬೆಲಾರಸ್‌ಗೆ ಹೋಗಲು ಜನಪ್ರತಿನಿಧಿಗಳು, ಊರಿನ ಕ್ರೀಡಾ ಸಂಘದವರು ಹಣ ಹೊಂದಿಸಿಕೊಟ್ಟಿದ್ದಾರೆ. ಜೊತೆಗೆ ಪೋಷಕರು ಕೂಡಿಟ್ಟ ಹಣವಿದೆ. ಅಷ್ಟು ಸಾಕು. ಈಗ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.

ಟೆನಿಕಾಯ್ಟ್‌ ಬಗ್ಗೆ ...
ಟೆನಿಕಾಯ್ಟ್‌ ಗ್ರಾಮೀಣ ಕ್ರೀಡೆ. ಸಂಜೆಯ ಹೊತ್ತಿನಲ್ಲಿ ಹಳ್ಳಿಗಳಲ್ಲಿ ಮಹಿಳೆಯರು ಮನೆ ಮುಂದೆ ಈ ಆಟದಲ್ಲಿ ಹೆಚ್ಚಾಗಿ ತೊಡಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆ, ಕಾಲೇಜುಗಳಲ್ಲಿ ಪ್ರಸಿದ್ಧಿ ಹೊಂದಿದೆ.

ಟೆನಿಕಾಯ್ಟ್‌ ಫೆಡರೇಷನ್‌ ಕೂಡ ಇದೆ. ಇದು ಕ್ರೀಡಾ ಇಲಾಖೆಯ ನೋಂದಣಿ ಪಡೆದಿದೆ. ಈ ಕ್ರೀಡೆ ಒಲಿಂಪಿಕ್ಸ್‌ ಪಟ್ಟಿಯಲ್ಲಿ ಇಲ್ಲ.

ರಬ್ಬರಿನ ರಿಂಗ್‌ ಬಳಸಿ ಈ ಕ್ರೀಡೆ ಆಡುತ್ತಾರೆ. ಹೀಗಾಗಿ, ರಿಂಗ್‌ ಟೆನಿಸ್‌ ಎಂದೂ ಕರೆಯುತ್ತಾರೆ. ಟೆನಿಸ್‌ ಕೋರ್ಟ್‌ ಮಾದರಿಯ ಅಂಗಳವಿರುತ್ತದೆ. ಸಿಂಗಲ್ಸ್‌, ಡಬಲ್ಸ್‌ ಪಂದ್ಯ ನಡೆಯುತ್ತವೆ. ಜರ್ಮನಿ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ, ರಷ್ಯಾದಲ್ಲಿ ಪ್ರಸಿದ್ಧಿ ಹೊಂದಿದೆ.

ಇವರೇ ಹಂಸವೇಣಿ ...
ಕೆ.ಆರ್‌.ಹಂಸವೇಣಿ ಅವರದ್ದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ. ತಂದೆ ರವಿಕುಮಾರ್‌ ರೈತರು. ತಾಯಿ ಮಧು ಗೃಹಿಣಿ. ಮೈಸೂರಿನ ಮಲ್ಲಮ್ಮ ಮರಿಮಲ್ಲಪ್ಪ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಟೆನಿಕಾಯ್ಟ್‌ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ರಾಷ್ಟ್ರೀಯ ಸಬ್‌ ಜೂನಿಯರ್‌, ಜೂನಿಯರ್‌, ದಕ್ಷಿಣ ವಲಯ, ಸ್ಕೂಲ್‌ ಗೇಮ್ಸ್‌ ಹಾಗೂ ಸೀನಿಯರ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟವು ಹಂಸವೇಣಿ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದೆ. ಈ ಹಳ್ಳಿಯನ್ನು ಕ್ರೀಡಾ ಗ್ರಾಮವೆಂದೇ ಕರೆಯುತ್ತಾರೆ.

ಸಾಧನೆಯ ಹಾದಿ...
* ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಟೂರ್ನಿಯಲ್ಲಿ ಚಾಂಪಿಯನ್‌

* ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ ಭಾಗಿ

* ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲಿ ದ್ವಿತೀಯ ಸ್ಥಾನ

* ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ

* ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT