ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games: ಆರ್ಚರಿಯಲ್ಲಿ ಭಾರತಕ್ಕೆ ಎರಡು ಚಿನ್ನ

ಪುರುಷರ ಮತ್ತು ಮಹಿಳೆಯರ ಕಾಂಪೌಂಡ್‌ ತಂಡಗಳ ಸಾಧನೆ
Published 5 ಅಕ್ಟೋಬರ್ 2023, 16:23 IST
Last Updated 5 ಅಕ್ಟೋಬರ್ 2023, 16:23 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಆರ್ಚರಿ ಸ್ಪರ್ಧಿಗಳು ಪದಕದೆಡೆಗೆ ಗುರಿಯಿಡುವ ಸಾಮರ್ಥ್ಯ ಮುಂದುವರಿಸಿದ್ದು, ಎರಡು ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ಗುರುವಾರ ನಡೆದ ಕಾಂಪೌಂಡ್‌ ತಂಡ ವಿಭಾಗದ ಸ್ಪರ್ಧೆಗಳಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ನಿಖರ ಪ್ರದರ್ಶನ ನೀಡಿದರು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಪರನೀತ್‌ ಕೌರ್‌ ಅವರನ್ನೊಳಗೊಂಡ ಭಾರತ ತಂಡ 230–229 ರಿಂದ ಚೀನಾ ತೈಪೆ ತಂಡವನ್ನು ಪರಾಭವಗೊಳಿಸಿತು.

ಚೆನ್‌ ಯಿ ಸುವಾನ್, ಹುವಾಂಗ್‌ ಜೌ ಮತ್ತು ವಾಂಗ್‌ ಲು ಯುನ್‌ ಅವರು ಒಡ್ಡಿದ ಸ್ಪೂರ್ತಿಯುತ ಸವಾಲನ್ನು ಬದಿಗೊತ್ತುವಲ್ಲಿ ಭಾರತದ ಆಟಗಾರ್ತಿಯರು ಯಶಸ್ವಿಯಾದರು.

ಜಿದ್ದಾಜಿದ್ದಿನ ಸೆಣಸಾಟ ನಡೆದ ಫೈನಲ್‌ನಲ್ಲಿ ಕೊನೆಯ ಸುತ್ತಿನ ಸ್ಪರ್ಧೆ ಬಾಕಿಯಿದ್ದಾಗ ಉಭಯ ತಂಡಗಳು 200–200 ರಲ್ಲಿ ಸಮಬಲ ಸಾಧಿಸಿದ್ದವು. ಕೊನೆಯ ಅವಕಾಶದಲ್ಲಿ ಭಾರತದ ಮೂವರೂ ಹತ್ತು ಪಾಯಿಂಟ್ಸ್‌ಗೆ ಗುರಿಯಿಟ್ಟರು. ಒಂದು ಪಾಯಿಂಟ್ಸ್‌ ಕಳೆದುಕೊಂಡು ಚೀನಾ ತೈಪೆ ತಂಡ ಬೆಳ್ಳಿಗೆ ಸಮಾಧಾನಪಟ್ಟುಕೊಂಡಿತು.

ಭಾರತ ಮಹಿಳಾ ತಂಡ ಎರಡು ತಿಂಗಳ ಹಿಂದೆ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿತ್ತು. ಇದೀಗ ಏಷ್ಯನ್‌ ಚಾಂಪಿಯನ್‌ ಆಗುವ ಮೂಲಕ ಮತ್ತೊಮ್ಮೆ ಪಾರಮ್ಯ ಮೆರೆದಿದೆ.

ಮಧ್ಯಾಹ್ನ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಭಾರತ 235–230 ರಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಅಭಿಷೇಕ್‌ ವರ್ಮಾ, ಓಜಸ್‌ ದೇವತಾಳೆ ಮತ್ತು ಪ್ರಥಮೇಶ್‌ ಜಾವ್ಕರ್‌ ಅವರು ನಿಖರ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನ ತಂದಿತ್ತರು.

ಕಾಂಪೌಂಡ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ಪಣಕ್ಕಿಟ್ಟಿದ್ದ ಎಲ್ಲ ಮೂರು ಚಿನ್ನದ ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಜ್ಯೋತಿ ಮತ್ತು ಓಜಸ್‌ ಅವರನ್ನೊಳಗೊಂಡ ಮಿಶ್ರ ತಂಡ ಬುಧವಾರ ಬಂಗಾರಕ್ಕೆ ಗುರಿಯಿಟ್ಟಿತ್ತು. ಇವರಿಬ್ಬರೂ ತಲಾ ಎರಡು ಚಿನ್ನ ಗೆದ್ದ ಸಾಧನೆ ಮಾಡಿದರು.

ವಿಜಯವಾಡದ 27 ವರ್ಷದ ಜ್ಯೋತಿ ಅವರಿಗೆ ಚಿನ್ನದ ‘ಹ್ಯಾಟ್ರಿಕ್‌’ ಸಾಧನೆ ಮಾಡುವ ಅವಕಾಶ ಲಭಿಸಿದೆ. ಶನಿವಾರ ನಡೆಯಲಿರುವ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾದ ಸೊ ಚಾಯೆವೊನ್‌ ವಿರುದ್ಧ ಪೈಪೋಟಿ ನಡೆಸುವರು.

ಆರ್ಚರಿಯಲ್ಲಿ ಭಾರತ ಐದು ಪದಕಗಳನ್ನು ಖಚಿತಪಡಿಸಿಕೊಂಡಿದೆ. ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಓಜಸ್‌ ಮತ್ತು ಅಭಿಷೇಕ್‌ ಎದುರಾಗಲಿದ್ದು, ಚಿನ್ನ ಮತ್ತು ಬೆಳ್ಳಿ ಭಾರತಕ್ಕೆ ಲಭಿಸುವುದು ಖಾತರಿಯಾಗಿದೆ.

ಏಷ್ಯನ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಆರ್ಚರಿ ಸ್ಪರ್ಧಿಗಳ ಈ ಹಿಂದಿನ ಅತ್ಯುತ್ತಮ ಪ್ರದರ್ಶನ 2014 ರಲ್ಲಿ ದಾಖಲಾಗಿತ್ತು. ಇಂಚೋನ್‌ನಲ್ಲಿ ನಡೆದಿದ್ದ ಕೂಟದಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡಿತ್ತು.

‘ಕಾಂಪೌಂಡ್‌ ಮಹಿಳೆಯರ ತಂಡದ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿ ಚಿನ್ನ ಗೆದ್ದಿದೆ. ಆದ್ದರಿಂದ ಈ ಸಾಧನೆ ನಮಗೆ ಹೆಚ್ಚಿನ ಖುಷಿ ನೀಡಿದೆ’ ಎಂದು ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.

ಮಹಿಳಾ ತಂಡದವರು ಕ್ವಾರ್ಟರ್‌ ಫೈನಲ್‌ನಲ್ಲಿ 11 ಪಾಯಿಂಟ್ಸ್‌ಗಳಿಂದ ಹಾಂಗ್‌ಕಾಂಗ್‌ (231–220) ತಂಡವನ್ನು ಮಣಿಸಿದ್ದರೆ, ಸೆಮಿಫೈನಲ್‌ನಲ್ಲಿ 14 ಪಾಯಿಂಟ್ಸ್‌ಗಳಿಂದ ಇಂಡೊನೇಷ್ಯಾ ವಿರುದ್ಧ ಗೆದ್ದಿದ್ದರು.

ಪುರುಷರ ತಂಡದವರು ಎಂಟರಘಟ್ಟದಲ್ಲಿ 235–221 ರಿಂದ ಭೂತಾನ್‌ ವಿರುದ್ಧ ಜಯಿಸಿದ್ದರೆ, ಸೆಮಿಯಲ್ಲಿ ಚೀನಾ ತೈಪೆಯನ್ನು ಪರಾಭವಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT