ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್‌: ಕುಸ್ತಿಪಟುಗಳ ನಿರ್ಧಾರ

ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ; ಸರ್ಕಾರದಿಂದ ಸಿಗದ ಸ್ಪಂದನೆ
Last Updated 20 ಜನವರಿ 2023, 5:07 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ನಾವು ನೀಡಿರುವ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಆದರೆ ಇದುವರೆಗೂ ಅದನ್ನು ಈಡೇರಿಸಿಲ್ಲ. ಆದ್ದರಿಂದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ’ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಹೇಳಿದ್ದಾರೆ.

ಬ್ರಿಜ್‌ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಖ್ಯಾತನಾಮ ಕುಸ್ತಿಪಟುಗಳು ಬುಧವಾರದಿಂದ ಧರಣಿ ಆರಂಭಿಸಿದ್ಧಾರೆ. ಗುರುವಾರವೂ ಪ್ರತಿಭಟನೆಯನ್ನು ಮುಂದುವರಿಯಿತು.

ಈ ಸಂದರ್ಭದಲ್ಲಿ ಒಂದು ಗಂಟೆಯ ಸಭೆಯನ್ನೂ ಕುಸ್ತಿಪಟುಗಳು ನಡೆಸಿದರು. ಇದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿನೇಶಾ ಪೋಗಟ್, ‘ನಮ್ಮ ದೂರುಗಳಿಗೆ ತೃಪ್ತಿಕರವಾದ ಪ್ರತಿಕ್ರಿಯೆ ಲಭಿಸದಿರುವುದು ಬೇಸರಮೂಡಿಸಿದೆ’ ಎಂದರು.

‘ನಿನ್ನೆ ನಮ್ಮೊಂದಿಗೆ ಒಬ್ಬಿಬ್ಬರು ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಶೋಷಣೆಗೊಳಾದ ಇನ್ನೂ 5–6 ಕುಸ್ತಿಪಟುಗಳು ಈ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಅವರು ಪ್ರತ್ಯೇಕ ದೂರುಗಳನ್ನು ದಾಖಲಿಸಲಿದ್ದಾರೆ. ಅವರ ಹೆಸರುಗಳನ್ನು ನಾವು ಬಹಿರಂಗಪಡಿಸುವುದಿಲ್ಲ. ಒಂದೊಮ್ಮೆ ಅವರ ಮಾಹಿತಿಗಳನ್ನು ಬಹಿರಂಗಪಡಿಸಲೇಬೇಕು ಎಂಬ ಆಗ್ರಹ ಬಂದರೆ ಅದು ಕಪ್ಪುದಿನವಾಗಲಿದೆ’ ಎಂದೂ ವಿನೇಶಾ ಅಸಮಾಧಾನ ವ್ಯಕ್ತಪಡಿಸಿದರು.

‘ಅವರಿಂದ (ಬ್ರಿಜ್‌ ಭೂಷಣ್) ರಾಜೀನಾಮೆ ಕೊಡಿಸುವದಕ್ಕಷ್ಟೇ ನಮ್ಮ ಹೋರಾಟ ಸೀಮಿತವಲ್ಲ. ಆ ವ್ಯಕ್ತಿಯನ್ನು ಜೈಲಿಗೆ ಕಳಿಸುತ್ತೇವೆ. ನಾವು ಕಾನೂನಿನ ದಾರಿಗೆ ಹೋಗಲು ಬಯಸಿದ್ದಿಲ್ಲ. ಆದರೆ ನಮ್ಮ ದೂರುಗಳಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ. ಮಹಾರಾಷ್ಟ್ರ ಹಾಗೂ ಕೇರಳದ ಕುಸ್ತಿಪಟುಗಳಿಂದ ಬೆಂಬಲ ವ್ಯಕ್ತವಾಗಿದೆ’ ಎಂದು ಒಲಿಂಪಿಯನ್ ವಿನೇಶಾ ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಒಲಿಂಪಿಯನ್ ಕುಸ್ತಿಪಟು ಹಾಗೂ ಭಾರತೀಯ ಜನತಾ ಪಕ್ಷದ ಧುರೀಣರೂ ಆಗಿರುವ ಬಬಿತಾ ಪೋಗಟ್, ‘ಭಾರತದ ಕುಸ್ತಿಗೆ ಹೊಸ ಸ್ವರೂಪ ನೀಡಬೇಕು. ಸಂಪೂರ್ಣ ಫೆಡರೇಷನ್‌ ವಜಾ ಮಾಡಿ ಹೊಸದಾಗಿ ರಚಿಸಬೇಕು’ ಎಂದು ಆಗ್ರಹಿಸಿದರು.

‘ನಾವು ಒಲಿಂಪಿಯನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಪದಕವಿ ಜೇತರಾಗಿದ್ದೇವೆ. ನಮ್ಮ ಮೆಲೆ ಯಾಕೆ ಅನುಮಾನ ಪಡಬೇಕು. ಸತ್ಯ ಹೇಳುತ್ತಿದ್ದೇವೆ. ನಂಬಿಕೆ ಇಡಿ’ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ 21 ವರ್ಷದ ಕುಸ್ತಿಪಟು ಅನ್ಷು ಮಲಿಕ್, ‘ಬಲ್ಗೇರಿಯಾದಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ನಡೆದ ಸಂದರ್ಭದಲ್ಲಿ ತಂಡವಿದ್ದ ಹೋಟೆಲ್‌ನಲ್ಲಿ ಬ್ರಿಜ್‌ಭೂಷಣ್ ಇದ್ದಾಗ ಮಹಿಳಾ ಕುಸ್ತಿಪಟುಗಳು ಮುಜುಗರ ಅನುಭವಿಸಿದ್ದರು’ ಎಂದು ಹೇಳಿದರು.

ಬಜರಂಗ್ ಪೂನಿಯಾ, ವಿನೇಶಾ, ಅನ್ಷು, ಸಾಕ್ಷಿ ಮಲಿಕ್ ಮತ್ತು ಸತ್ಯವ್ರತ್ ಕಡಿಯಾನ್ ಅವರಿದ್ದ ತಂಡವು ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತಾ ಚತುರ್ವೇದಿ, ಎಸ್‌ಎಐ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಮತ್ತು ಜಂಟಿ ಕಾರ್ಯದರ್ಶಿ ಕುನಾಲ್ ಅವರೊಂದಿಗೆ ಚರ್ಚಿಸಿದರು. ಸರ್ಕಾರದೊಂದಿಗೆ ಸಭೆ ಏರ್ಪಡಿಸಲು ಆಗ್ರಹಿಸಿದರು.

ಡಬ್ಲ್ಯುಎಫ್‌ಐ ತುರ್ತು ಸಭೆ
ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಚರ್ಚೆ ನಡೆಸಲು ಡಬ್ಲ್ಯುಎಫ್‌ಐ ಅಯೋಧ್ಯೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.

‘ಹೌದು. ಸಭೆ ಕರೆಯಲಾಗಿದೆ. ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು. ಅಧ್ಯಕ್ಷರು ರಾಜೀನಾಮೆ ನೀಡುವರೋ ಇಲ್ಲವೋ ಎಂದು ಈಗಲೇ ಖಚಿತವಾಗಿ ಹೇಳಲಾಗದು’ ಎಂದು ಮೂಲಗಳು ತಿಳಿಸಿವೆ.

ಬೃಂದಾ ಕಾರಟ್‌ಗೆ ವಿರೋಧ
ಪ್ರತಿಭಟನಾ ಸ್ಥಳಕ್ಕಾಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಭಾಷಣ ಮಾಡದಂತೆ ತಡೆಯಲಾಯಿತು.

‘ಮೇಡಂ, ದಯವಿಟ್ಟು ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಕೊಡುವುದು ಬೇಡ’ ಎಂದು ಬಜರಂಗ್ ಪೂನಿಯಾ ಮನವಿ ಮಾಡಿಕೊಂಡರು.

ಎನ್‌ಸಿಡಬ್ಲ್ಯು ಸಲಹೆ
ಕುಸ್ತಿಪಟುಗಳು ತಮ್ಮ ದೂರುಗಳನ್ನು ತಮಗೆ ಸಲ್ಲಿಸಿದರೆ ವಿಚಾರಣೆ ನಡೆಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಅಯೋಗ (ಎನ್‌ಸಿಡಬ್ಲ್ಯು) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT