ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷಾ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ವಿದ್ಯಾ

Published 11 ಸೆಪ್ಟೆಂಬರ್ 2023, 14:03 IST
Last Updated 11 ಸೆಪ್ಟೆಂಬರ್ 2023, 14:03 IST
ಅಕ್ಷರ ಗಾತ್ರ

ಚಂಡೀಗಡ : ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್‌ ಅವರು ದಿಗ್ಗಜ ಅಥ್ಲೀಟ್‌ ಪಿ.ಟಿ.ಉಷಾ ಅವರ 39 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.

ಇಲ್ಲಿ ನಡೆಯುತ್ತಿರುವ ಇಂಡಿಯನ್‌ ಗ್ರ್ಯಾನ್‌ಪ್ರಿ ಅಥ್ಲೆಟಿಕ್‌ ಕೂಟದಲ್ಲಿ ಸೋಮವಾರ ಮಹಿಳೆಯರ 400 ಮೀ. ಹರ್ಡಲ್ಸ್‌ ಸ್ಪರ್ಧೆಯನ್ನು ವಿದ್ಯಾ 55.43 ಸೆ.ಗಳಲ್ಲಿ ಪೂರೈಸಿದರು.

ಉಷಾ ಅವರು 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ 55.42 ಸೆ.ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು. ಅವರ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. 24 ವರ್ಷದ ವಿದ್ಯಾ ಅವರಿಗೆ ಸೆಕೆಂಡಿನ ನೂರನೇ ಒಂದು ಭಾಗದಿಂದ ದಾಖಲೆ ಸರಿಗಟ್ಟುವ ಅವಕಾಶ ತಪ್ಪಿಹೋಯಿತು.

ಉಷಾ ಹೆಸರಿನಲ್ಲಿರುವ ದಾಖಲೆ ಭಾರತದ ಅಥ್ಲೆಟಿಕ್ಸ್‌ನಲ್ಲಿ ಎರಡನೇ ಅತ್ಯಂತ ಹಳೆಯ ರಾಷ್ಟ್ರೀಯ ದಾಖಲೆ ಎನಿಸಿದೆ. ಮ್ಯಾರಥಾನ್‌ನಲ್ಲಿ ಶಿವನಾಥ್‌ ಸಿಂಗ್‌ ಅವರ ಹೆಸರಿನಲ್ಲಿರುವ ದಾಖಲೆ (1978) ಅತ್ಯಂತ ಹಳೆಯ ದಾಖಲೆ.

‘ಉಷಾ ಮೇಡಂ ಶ್ರೇಷ್ಠ ಅಥ್ಲೀಟ್‌ ಆಗಿರುವ ಕಾರಣ ಅವರ ದಾಖಲೆಯನ್ನು ಇಷ್ಟು ಸುದೀರ್ಘ ಅವಧಿಯವರೆಗೆ ಯಾರಿಗೂ ಮುರಿಯಲು ಆಗಿಲ್ಲ. ಅವರ ದಾಖಲೆ ಮುರಿಯಬೇಕೆಂಬ ಗುರಿ ಇಟ್ಟುಕೊಂಡು ಕಣಕ್ಕಿಳಿದಿದ್ದೆ’ ಎಂದು ವಿದ್ಯಾ ಹೇಳಿದರು.

‘ಮೊದಲ 200 ಮೀ. ಓಟವನ್ನು ಸ್ವಲ್ಪ ನಿಧಾನವಾಗಿ ಪೂರೈಸಿದ ನಾನು ಬಳಿಕ ವೇಗ ಹೆಚ್ಚಿಸಿದೆ. ಮೊದಲ 200 ಮೀ. ದೂರವನ್ನು ವೇಗವಾಗಿ ಓಡಿದ್ದಲ್ಲಿ, ರಾಷ್ಟ್ರೀಯ ದಾಖಲೆ ಮುರಿಯುವ ಅವಕಾಶವಿತ್ತು. ಆದರೆ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಸ್ಥಾಪಿಸಲು ಪ್ರಯತ್ನಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT