ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

Published 13 ಆಗಸ್ಟ್ 2024, 12:40 IST
Last Updated 13 ಆಗಸ್ಟ್ 2024, 12:40 IST
ಅಕ್ಷರ ಗಾತ್ರ

ನವದೆಹಲಿ: ‘ಇತ್ತಿಚೆಗಷ್ಟೇ ಕೊನೆಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ ಸಿದ್ಧತೆಯಲ್ಲಿ ನಿರೀಕ್ಷಿಸಿದಷ್ಟು ಆರ್ಥಿಕ ಸಹಕಾರ ಹಾಗೂ ನಮಗೆ ಬೇಕಾದ ತರಬೇತುದಾರರ ನಿಯೋಜನೆ ಕ್ರೀಡಾ ಸಚಿವಾಲಯದಿಂದ ಲಭ್ಯವಾಗಿಲ್ಲ’ ಎಂದು ಬ್ಯಾಡ್ಮಿಂಟನ್ ಡಬಲ್ಸ್‌ನ ಭಾರತದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ಗೆ ತೆರಳುವ ಭಾರತೀಯ ಅಥ್ಲೀಟ್‌ಗಳಿಗೆ ಆರ್ಥಿಕ ನೆರವು ನೀಡುವ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ವಿವರವಾದ ದಾಖಲೆಗಳನ್ನು ನೀಡಿತ್ತು. ಇದರನ್ವಯ ಅಶ್ವಿನಿ ಅವರಿಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ (ಟಿಒಪಿಎಸ್‌) ಅಡಿಯಲ್ಲಿ ₹4.50 ಲಕ್ಷವನ್ನು ನೀಡಲಾಗಿತ್ತು. ವಾರ್ಷಿಕ ಕ್ಯಾಲೆಂಡರ್‌ ಆಧಾರಿತ ₹1.48 ಕೋಟಿ ಮಂಜೂರು ಮಾಡಲಾಗಿದೆ. ಇದರಲ್ಲಿ ಆಟಕ್ಕೆ ಅಗತ್ಯವಿರುವ ಸಲಕರಣೆ, ಅಂತರರಾಷ್ಟ್ರೀಯ ಸ್ಪರ್ಧೆ ಹಾಗೂ ಸಹ ಆಟಗಾರರ ಖರ್ಚೂ ಒಳಗೊಂಡಿದೆ ಎಂದೆನ್ನಲಾಗಿತ್ತು.

‘ಇದು ನಿಜಕ್ಕೂ ಆಘಾತಕಾರಿ. ಆದರೆ ಇಷ್ಟೊಂದು ಹಣ ಕೊಟ್ಟಿರುವುದಾಗಿ ದೇಶಕ್ಕೆ ಸಾರಿರುವುದು ಹಾಸ್ಯಾಸ್ಪದ. ನನಗೆ ಯಾವುದೇ ಹಣ ನೀಡಿಲ್ಲ. ರಾಷ್ಟ್ರೀಯ ಶಿಬಿರದ ಕುರಿತು ಮಾತನಾಡಲಾಗಿದೆ. ಆಗ ನೀಡಿದ ₹1.5 ಕೋಟಿ ಎಲ್ಲಾ ಆಟಗಾರರ ಮೇಲೂ ಖರ್ಚು ಮಾಡಲಾಗಿತ್ತು’ ಎಂದು ಅಶ್ವಿನಿ ಪಿಟಿಐಗೆ ಹೇಳಿದ್ದಾರೆ.

‘ನಮಗೆ ನಿರ್ದಿಷ್ಟ ಕೋಚ್ ಇರಲಿಲ್ಲ. ನನ್ನ ವೈಯಕ್ತಿ ತರಬೇತುದಾರರು ಮಾತ್ರ ಇದ್ದರು. ಅವರ ಸಂಭಾವನೆಯನ್ನು ನಾನು ನನ್ನ ಕೈಯಿಂದ ನೀಡಿದ್ದೇನೆ. ನಾನು ಯಾರಿಗಾಗಿಯೂ ಹಣ ಪಡೆದಿಲ್ಲ. 2023ರ ನವೆಂಬರ್‌ವರೆಗೂ ನಾನು ನನ್ನದೇ ಖರ್ಚಿನಲ್ಲಿ ತರಬೇತಿ ಪಡೆದು ಆಡಿದ್ದೇನೆ. ನಾನು ಅರ್ಹತೆ ಪಡೆದ ನಂತರ ಟಿಒಪಿಎಸ್ ವ್ಯಾಪ್ತಿಗೆ ಸೇರಿದೆ’ ಎಂದಿದ್ದಾರೆ.

₹1.48 ಕೋಟಿ ಖರ್ಚು ಕುರಿತು ಮಾಹಿತಿ ನೀಡಿರುವ ಎಸ್‌ಎಐ ಮೂಲಗಳು, ‘ಈ ಹಣವನ್ನು ಅಶ್ವಿನಿ ಅವರ ಪ್ರವಾಸ, ವಾಸ್ತವ್ಯ, ಆಹಾರ ಮತ್ತು ಸ್ಪರ್ಧೆಯ ಶುಲ್ಕಕ್ಕೆ ಖರ್ಚು ಮಾಡಲಾಗಿದೆ. ಪ್ಯಾರಿಸ್ ವೃತ್ತದಲ್ಲಿ ಅವರು ಸ್ಪರ್ಧಿಸಿದ ಎಲ್ಲಾ ಪಂದ್ಯಗಳಿಗೂ ಖರ್ಚು ಮಾಡಲಾಗಿದೆ’ ಎಂದಿವೆ.

2010, 2014 ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಶ್ವಿನಿ ಅವರ ಡಬಲ್ಸ್ ತಂಡವು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕವನ್ನು ಗೆದ್ದಿದೆ. ಇವರು ಲಂಡನ್, ರಿಯೊ ಒಲಿಂಪಿಕ್ಸ್‌ನಲ್ಲಿ ಜ್ವಾಲಾ ಗುಟ್ಟಾ ಜತೆಗೂಡಿ ಆಡಿದ್ದರು.

2022ರ ಆಗಸ್ಟ್‌ವರೆಗೂ ಅಶ್ವಿನಿ ಅವರು ಎನ್‌. ಸಿಕ್ಕಿ ರೆಡ್ಡಿ ಅವರೊಂದಿಗೆ ಡಬಲ್ಸ್‌ನಲ್ಲಿ ಆಡಿದ್ದರು. 2023ರ ಜನವರಿ ನಂತರ ತನಿಶಾ ಕ್ರಾಸ್ಟೊ ಅವರ ಜತೆಗೂಡಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

‘ಸಚಿವಾಲಯವು ನನಗೆ ಸದಾ ನೆರವಾಗಿದೆ. ಕಳೆದ ಹಲವು ವರ್ಷಗಳಿಂದ ನಾನು ತಂಡದಲ್ಲಿದ್ದೇನೆ. ನನಗೆ ಸಿಕ್ಕ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ’ ಎಂದು ಅಶ್ವಿನಿ ಹೇಳಿದ್ದಾರೆ.

‘ಕಳೆದ ವರ್ಷ ನನಗೆ ಬೆಂಬಲ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ನನಗೆ ₹1.5 ಕೋಟಿ ನೀಡಲಾಗಿದೆ ಎಂದು ಹೇಳುವುದು ತಪ್ಪಾಗಲಿದೆ. ನಾಲ್ಕು ವರ್ಷಗಳಿಗೆ ಇಷ್ಟು ನೀಡಿದ್ದಾರೆ ಎಂದರೆ ಒಂದು ಅರ್ಥವಿರುತ್ತದೆ’ ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಅಶ್ವಿನಿ ಅವರು ಈ ಬಾರಿ ತನಿಶಾ ಜತೆಗೂಡಿ ಆಡಿದ್ದರು. ಒಂದೂ ಪಂದ್ಯವನ್ನು ಗೆಲ್ಲದ ಈ ಜೋಡಿ, ಗ್ರೂಪ್ ಹಂತದಿಂದಲೇ ನಿರ್ಗಮಿಸಿತ್ತು.

‘ನಮಗೆ ಬೇಕಾದ ಕೋಚ್ ಇಲ್ಲದ ಕಾರಣ ನಾನು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ ಆ ಸೋಲಿನ ಹೋಣೆಯನ್ನು ನಾನೇ ಹೊರುತ್ತೇನೆ. ಆದರೆ, ನನಗೆ ಏನನ್ನೂ ಕೊಡದೇ, ಇಷ್ಟೊಂದು ಹಣ ನೀಡಿದ್ದೇನೆ ಎಂದು ಸುಳ್ಳು ಹೇಳುವುದು ಸರಿಯಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT