ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಕೈತಪ್ಪಿರುವುದಕ್ಕೆ ಬೇಸರವಿಲ್ಲ. ಗಾಯದಿಂದಾಗಿ ಅಲ್ಪ ಹಿನ್ನಡೆಯಾಗಿತ್ತು. ಇನ್ನಷ್ಟು ದೂರಕ್ಕೆ ಜಾವೆಲಿನ್ ಎಸೆಯುವವರೆಗೂ ನೆಮ್ಮದಿ ಇರುವುದಿಲ್ಲ ಎಂದು ಭಾರತದ ತಾರೆ ನೀರಜ್ ಚೋಪ್ರಾ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
'ಸ್ಪರ್ಧೆ ಅತ್ಯಂತ ನಿಕಟವಾಗಿತ್ತು. ಆ ನಿರ್ದಿಷ್ಟ ದಿನದಲ್ಲಿ ಯಾವ ಅಥ್ಲೀಟ್ ಆದರೂ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಅಂದು ಅಥ್ಲೀಟ್ ದೇಹಭಾಷೆ ಅದ್ಭುತವಾಗಿಯೇ ಪ್ರತಿಕ್ರಿಯಿಸುತ್ತದೆ. ಮಾಡಿದ ಪ್ರಯತ್ನ ಎಲ್ಲವೂ ಪರಿಪೂರ್ಣವೆನಿಸುತ್ತದೆ. ಇಂದು ಅರ್ಷದ್ ಅವರ ದಿನವಾಗಿತ್ತು. ಟೋಕಿಯೊದಲ್ಲಿ ನನ್ನ ದಿನವಾಗಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ನನ್ನ ದಿನವಾಗಿತ್ತು. ಆದರೂ ನನಗೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು' ಎಂದು ಅವರು ತಿಳಿಸಿದ್ದಾರೆ.
'ನಾನು ಈಗಲೂ ಕೆಲವೊಂದು ವಿಚಾರಗಳ ಬಗ್ಗೆ ಗಮನಹರಿಸಬೇಕಿದೆ. ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಬೇಕಿದೆ. ಆಡುವ ವೇಳೆ ಗಾಯದ ಮೇಲೆ ಹೆಚ್ಚಿನ ಗಮನದಿಂದಾಗಿ ಏಕಾಗ್ರತೆಗೆ ಭಂಗವುಂಟಾಗದಂತೆ ನೋಡಿಕೊಳ್ಳಬೇಕಿದೆ' ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ
(ಪಿಟಿಐ ಚಿತ್ರ)
'ತುಂಬಾ ಸಮಯದಿಂದ ಗಾಯದ ಭೀತಿ ಕಾಡುತ್ತಿದೆ. ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ತಪ್ಪುಗಳನ್ನು ಸರಿಪಡಿಸುವುದರತ್ತ ಗಮನ ಹರಿಸಲಿದ್ದೇನೆ. ಮಾನಸಿಕ ಹಾಗೂ ದೈಹಿಕವಾಗಿ ಒಮ್ಮೆ ಎಲ್ಲವೂ ಫಿಟ್ ಆದ ಬಳಿಕ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿದೆ. ತುಂಬಾ ಕೆಲಸ ಮಾಡಲು ಬಾಕಿಯಿದೆ' ಎಂದು ತಿಳಿಸಿದ್ದಾರೆ.
'ದೇಶಕ್ಕಾಗಿ ಪದಕ ಗೆಲ್ಲಲು ಸಾಧ್ಯವಾಗಿರುವುದು ತುಂಬಾ ಸಂತಸವಾಗುತ್ತಿದೆ. ಚಿನ್ನ ಗೆದ್ದು ರಾಷ್ಟ್ರಗೀತೆ ಮೊಳಗಿಸಲು ಸಾಧ್ಯವಾಗದೇ ಇರಬಹುದು. ಆದರೂ ದೇಶಕ್ಕಾಗಿ ಪದಕ ಗೆಲ್ಲಲು ಸಾಧ್ಯವಾಗಿರುವುದು ಹೆಮ್ಮೆಯ ವಿಷಯ' ಎಂದು ತಿಳಿಸಿದ್ದಾರೆ.
'ನನಗೆ ಈವರೆಗೆ 90 ಮೀಟರ್ ಜಾವೆಲಿನ್ ಎಸೆಯಲು ಸಾಧ್ಯವಾಗಿಲ್ಲ. ಆದರೆ ಆಟ ಇಲ್ಲಿಗೆ ಮುಗಿಯುವುದಿಲ್ಲ. ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ. ಅದನ್ನು ಸಾಧಿಸುವವರೆಗೂ ನೆಮ್ಮದಿ ಇರುವುದಿಲ್ಲ. ಇನ್ನಷ್ಟು ಸಾಧನೆ ಮಾಡುವ ಹಂಬಲ ಇದೆ' ಎಂದು ತಿಳಿಸಿದ್ದಾರೆ.
'ನಾನು ಜಾವೆಲಿನ್ ಎಸೆಯುವಾಗ ಶೇ 60ರಿಂದ 70ರಷ್ಟು ಗಮನವು ಗಾಯದ ಕಡೆ ಇರುತ್ತದೆ. ಗಾಯವಾಗಲು ಬಯಸುವುದಿಲ್ಲ. ಓಡುವಾಗ ನನ್ನ ವೇಗ ಕಡಿಮೆಯಾಗಿತ್ತು. ನೀವದನ್ನು ಗಮನಿಸಿರಬಹುದು. ಗಾಯದ ಭೀತಿ ಇಲ್ಲದೆ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿಯಾಗಿತ್ತು' ಎಂದು ತಿಳಿಸಿದ್ದಾರೆ.
'ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಸಲಹೆ ನೀಡಿದ್ದರು. ಆದರೆ ವಿಶ್ವ ಚಾಂಪಿಯನ್‌ಷಿಪ್ ನಂತರ ಆ ನಿರ್ಧಾರ ತೆಗೆದುಕೊಳ್ಳಲು ನನಗೆ ಸಮಯವಿರಲಿಲ್ಲ. ಏಕೆಂದರೆ ಒಲಿಂಪಿಕ್ಸ್‌ಗೆ ತಯಾರಿ ನಡೆಸಬೇಕಿತ್ತು' ಎಂದು ತಿಳಿಸಿದ್ದಾರೆ.
ನೀರಜ್ ಚೋಪ್ರಾ
(ಪಿಟಿಐ ಚಿತ್ರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.