ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಜಾವೆಲಿನ್ ಥ್ರೋ: ರಜತ ರಥವೇರಿದ ನೀರಜ್, ನದೀಂಗೆ ಚಿನ್ನದ ಕಿರೀಟ

ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ಭಾರತೀಯ ಅಥ್ಲೀಟ್
Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಪ್ಯಾರಿಸ್‌: 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿ ದಾಖಲೆ ಮಾಡಿದ್ದರು. ಅದೇ ಸ್ಪರ್ಧೆಯಲ್ಲಿ ಚೋಪ್ರಾಗೆ ಪೈಪೋಟಿಯೊಡ್ಡಿದ್ದ ನದೀಮ್ ಅವರು  84.62 ಮೀಟರ್ಸ್ ದೂರ ಎಸೆದು ಐದನೇ ಸ್ಥಾನ ಗಳಿಸಿದ್ದರು. 

ಆದರೆ ಅಲ್ಲಿಂದ ಇಲ್ಲಿಯವರೆಗೂ ನದೀಂ ಮತ್ತು ನೀರಜ್ ಅವರ ಸ್ನೇಹ ಉತ್ತಮವಾಗಿ ಬೆಳೆದಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ವಿರಸವಿದ್ದರೂ ಇವರಿಬ್ಬರ ಕ್ರೀಡಾಸ್ಫೂರ್ತಿ ಉತ್ತಮ ಉದಾಹರಣೆಯಾಗಿ ಗಮನ ಸೆಳೆದಿದೆ. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ನಡೆದ ಸಂದರ್ಭದಲ್ಲಿ ಕೊನೆ ಸುತ್ತಿಗೂ ಮುನ್ನ ಅಭ್ಯಾಸ ನಡೆಸುವಾಗ ನದೀಂ ಅವರು ನೀರಜ್‌ ಅವರಿಂದಲೇ ಜಾವೆಲಿನ್ ಪಡೆದು ಬಳಸಿದ್ದರು. ಇದು ಸಾಮಾಜಿಕಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. 

ಆಗ ಚೋಪ್ರಾ ಅವರು, ‘ಕ್ರೀಡೆಯು ನಮಗೆ ಒಟ್ಟಿಗೆ ಇರಲು, ಒಗ್ಗೂಡಲು ಹೇಳಿಕೊಡುತ್ತದೆ. ನದೀಂ ಅವರು ನನ್ನ ಜಾವೆಲಿನ್‌ ತೆಗೆದುಕೊಂಡಿದ್ದರ ಕುರಿತು ಎದ್ದಿರುವ ವಿವಾದ, ಜನರ ಪ್ರತಿಕ್ರಿಯೆಗಳು ನನಗೆ ಬೇಸರ ತರಿಸಿವೆ’ ಎಂದು ನೀರಜ್‌ ಚೋಪ್ರಾ ಹೇಳಿದ್ದರು. 

ಹೋದ ವರ್ಷ ಬುಡಾಪೆಸ್ಟ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್‌ ಕೂಟ ನಡೆಯಿತು. ಈ ವೇಳೆಯಲ್ಲಿ ನೀರಜ್‌ ಅವರು ಚಿನ್ನ ಗೆದ್ದುಕೊಂಡರು. ನದೀಮ್‌ ಅವರು ಬೆಳ್ಳಿ ಜಯಿಸಿದ್ದರು. ಪದಕ ಪ್ರದಾನದ ಬಳಿಕ, ಫೋಟೊ ತೆಗೆಯುವ ವೇಳೆ, ನೀರಜ್‌ ಅವರು ನದೀಮ್‌ ಅವರನ್ನೂ ಕರೆದರು. ನೀರಜ್‌ ಅವರ ಈ ನಡವಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದುಕೊಂಡಿತು.  

ನೀರಜ್‌ಗೆ ಎರಡನೇ ಪದಕ: 

ಟೋಕಿಯೊ ಒಲಿಂಪಿಕ್ಸ್​ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ, ಈ ಬಾರಿ 26 ವರ್ಷದ ನೀರಜ್‌ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ ಥ್ರೋ ಮಾಡುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಫೈನಲ್‌ನಲ್ಲಿ 12 ಸ್ಪರ್ಧಿಗಳ ಜತೆ ಹೋರಾಟ ನಡೆಸಿದರು.

ಒಲಿಂಪಿಕ್ ಕೂಟದ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕ ಗೆದ್ದ ಭಾರತದ ನಾಲ್ಕನೇ ಕ್ರೀಡಾಪಟು ಎಂಬ ಖ್ಯಾತಿಯೂ ಅವರದ್ದಾಯಿತು. ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು (ಒಂದು ಬೆಳ್ಳಿ, ಒಂದು ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (ಒಂದು ಬೆಳ್ಳಿ, ಒಂದು ಕಂಚು) ಮತ್ತು ಶೂಟರ್ ಮನು ಭಾಕರ್ (ಎರಡು ಕಂಚು)ಸ್ವಾತಂತ್ರ್ಯದ ನಂತರ ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ ಕ್ರೀಡಾಪಟು ಅವರಾಗಿದ್ದಾರೆ. ‌ 

ಇದು ಅವರ ಎರಡನೇ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. 2022ರ ಜೂನ್‌ನಲ್ಲಿ ಚೋಪ್ರಾ ಅವರು 89.94 ಮೀ ದೂರ ಥ್ರೋ ಮಾಡಿದ್ದು, ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ.

ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 89.34 ಮೀಟರ್‌ ಜಾವೆಲಿನ್‌ ಎಸೆದು ಫೈನಲ್‌ಗೆ ಲಗ್ಗೆ ಹಾಕಿದ್ದರು. ಆದರೆ, ಪಾಕಿಸ್ತಾನದ ಅರ್ಷದ್‌ ನದೀಮ್‌ ಅವರನ್ನು ಮೀರಿಸಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT