ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್: ದೀಪಕ್‌, ಹುಸಾಮುದ್ದೀನ್‌ಗೆ ಕಂಚು

Published 12 ಮೇ 2023, 15:36 IST
Last Updated 12 ಮೇ 2023, 15:36 IST
ಅಕ್ಷರ ಗಾತ್ರ

ತಾಷ್ಕೆಂಟ್‌, ಉಜ್ಬೆಕಿಸ್ತಾನ:  ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಭಾರತದ ಮೊಹಮ್ಮದ್ ಹುಸಾಮುದ್ದೀನ್ ಮತ್ತು ದೀಪಕ್ ಬೊರಿಯಾ ಅವರ ಕನಸು ಕೈಗೂಡಲಿಲ್ಲ. ಸೆಮಿಫೈನಲ್‌ ಬೌಟ್‌ಗಳಲ್ಲಿ ದೀಪಕ್‌ ಅವರು ವೀರೋಚಿತ ಹೋರಾಟದಲ್ಲಿ ಸೋತರೆ, ಹುಸಾಮುದ್ದೀನ್ ಮೊಣಕಾಲು ನೋವಿನ ಕಾರಣ ಕಣಕ್ಕಿಳಿಯಯಲಿಲ್ಲ. ಹೀಗಾಗಿ ಇಬ್ಬರೂ ಬಾಕ್ಸರ್‌ಗಳು ಕಂಚಿನ ಪದಕ ಗಳಿಸಿದರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ, 29 ವರ್ಷದ ಹುಸಾಮುದ್ದೀನ್‌ ಅವರು ಕ್ಯೂಬಾದ ಸೈಡೆಲ್ ಹೊರ್ಟಾ ಎದುರು ಶುಕ್ರವಾರ ಕಣಕ್ಕಿಳಿಯಬೇಕಿತ್ತು.

‘ಹುಸಾಮುದ್ದೀನ್ ಅವರು ಗಾಯದ ಹಿನ್ನೆಲೆಯಲ್ಲಿ ವಾಕ್‌ಓವರ್ ನೀಡಿದ್ದು, ಕಂಚಿನ ಪದಕ ಗಳಿಸಿದ್ದಾರೆ. ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ಗಾಯಗೊಂಡಿದ್ದ ಅವರಿಗೆ ಮುಂದಿನ ಬೌಟ್‌ನಲ್ಲಿ ಸ್ಪರ್ಧಿಸದಂತೆ ಸೂಚಿಸಲಾಗಿತ್ತು‘ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಪ್ರಕಟಣೆಯಲ್ಲಿ ತಿಳಿಸಲಾಗಿದೆ.

51 ಕೆಜಿ ವಿಭಾಗದ ನಾಲ್ಕರ ಘಟ್ಟದ ಬೌಟ್‌ನಲ್ಲಿ ದೀಪಕ್‌ 3–4ರಿಂದ ಎರಡು ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ, ಫ್ರಾನ್ಸ್‌ನ ಬಿಲಾಲ್ ಬೆನ್ನಾಮಾ ಎದುರು ನಿರಾಸೆ ಅನುಭವಿಸಿದರು.

ಮೊದಲ ಸುತ್ತಿನಿಂದಲೇ ಬೆನ್ನಾಮಾ ಆಕ್ರಮಣಕಾರಿಯಾಗಿ ಕಂಡುಬಂದರು. ನೇರ ಪಂಚ್‌ಗಳ ಮೂಲಕ ದೀಪಕ್ ಅವರನ್ನು ಕಾಡಿದರು. ಭಾರತದ ಬಾಕ್ಸರ್‌ಗೆ ಹೆಚ್ಚು ಅವಕಾಶಗಳನ್ನು ನೀಡದೆ ಮೇಲುಗೈ ಸಾಧಿಸಿದರು.

ಎರಡನೇ ಸುತ್ತುನಲ್ಲಿ ದೀಪಕ್ ಅವರು ರಕ್ಷಣಾತ್ಮಕ ತಂತ್ರಗಳಿಗೆ ಮೊರೆ ಹೋದರೂ ಬೆನ್ನಾಮಾ ಸತತವಾಗಿ ದವಡೆಯ ಬಳಿ ಹೊಡೆತಗಳನ್ನು ಪ್ರಯೋಗಿಸಿದರು. ದೀಪಕ್ ಕೂಡ ಅಲ್ಪ ಪ್ರತಿದಾಳಿ ನಡೆಸಿದರು. ಈ ಸುತ್ತಿನಲ್ಲಿ ಉಭಯ ಬಾಕ್ಸರ್‌ಗಳು ಹೆಚ್ಚು ದಣಿದರು.

ಮೂರನೇ ಸುತ್ತಿನಲ್ಲಿ ಬೆನ್ನಾಮಾ ಮತ್ತಷ್ಟು ಆಕ್ರಮಣಕಾರಿಯಾದರು. ಬಲಿಷ್ಠ ಪಂಚ್‌ಗಳ ಮೂಲಕ ದೀಪಕ್ ಅವರನ್ನು ಕಂಗೆಡಿಸಿದರು.

ಬೌಟ್‌ ಮರುಪರಿಶೀಲನೆಯ ಬಳಿಕ ಬೆನ್ನಾಮಾ ಅವರನ್ನು ವಿಜೇತರೆಂದು ಘೋಷಿಸಲಾಯಿತು.

‌‌‌ದೀಪಕ್ ಬೊರಿಯಾ– ಟ್ವಿಟರ್ ಚಿತ್ರ
‌‌‌ದೀಪಕ್ ಬೊರಿಯಾ– ಟ್ವಿಟರ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT