‘ನಮ್ಮೂರಿಗೂ ಮದ್ಯದಂಗಡಿ ಬೇಕು...’ ಚಟ್ನಿಹಳ್ಳಿ ಗ್ರಾಮಸ್ಥರ ಸಭೆಯಲ್ಲಿ ಒಂದು ಗುಂಪು ಒತ್ತಾಯ ಮಾಡಿತು.
‘ನಮ್ಮೂರ ಜನ ಪಕ್ಕದೂರಿನ ಮದ್ಯ ದಂಗಡಿಗೆ ಹೋಗುವಂತಾಗಿದೆ. ಒಂದು ಎಣ್ಣೆ ಅಂಗಡಿ ಮಾಡಿಕೊಳ್ಳೋ ಯೋಗ್ಯತೆ ನಿಮ್ಮೂರಿ ನವರಿಗಿಲ್ಲ ಅಂತ ಆ ಊರಿನವರು ನಮ್ಮನ್ನು ಹಂಗಿಸುತ್ತಾರೆ’ ಸೀನ ಸಿಟ್ಟಿಗೆದ್ದ.
‘ನಮ್ಮೂರಲ್ಲೂ ಮದ್ಯದಂಗಡಿ ತೆರೆದು ನಾವು ಸ್ವಾವಲಂಬಿ ಆಗಬೇಕು’ ಅಂದ ವೆಂಕಿ.
‘ಎಣ್ಣೆ ಅಂಗಡಿ ಸಹವಾಸ ಮಾಡಿದ್ರೆ ಸಂಸಾರ ಉಳಿತಾವೇನ್ರೋ? ಮಕ್ಕಳುಮರಿ ಕುಡಿತ ಕಲಿತುಬಿಟ್ರೆ ಗತಿ ಏನ್ರೋ?’ ತಿಮ್ಮಜ್ಜ ಕಳವಳಗೊಂಡ. ‘ಹಾಗೇನಾಗಲ್ಲ ಬಿಡಜ್ಜಾ, ಅಬಕಾರಿ ಇಲಾಖೆ ಸಹಯೋಗದಲ್ಲಿ ಕುಡಿತದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿಸ್ತೀವಿ’ ಅಂದ ಪುಟ್ಸಾಮಿ.
‘ಊರಿಗೆ ಹೈಸ್ಕೂಲ್ ಬೇಕು, ಆಸ್ಪತ್ರೆ ಬೇಕು, ಕುಡಿಯುವ ನೀರು ಬೇಕು ಅಂತ ಸರ್ಕಾರವನ್ನು ಕೇಳೋದು ಬಿಟ್ಟು ಎಣ್ಣೆ ಅಂಗಡಿ ಬೇಕು ಅನ್ನೋದು ಸರಿಯೇನ್ರಲಾ?’ ತಿಮ್ಮಜ್ಜ ಗದರಿದ.
‘ರಸ್ತೆ, ಚರಂಡಿ, ರೇಷನ್ ಡಿಪೊದಂತೆ ಎಣ್ಣೆ ಅಂಗಡಿಯೂ ಸರ್ಕಾರದ ಸೌಲಭ್ಯ. ಅದೂ ಮೂಲ ಸೌಕರ್ಯವೇ’ ಸೂರಿ ಹೇಳಿದ.
‘ನಮ್ಮೂರಿಗೆ ಒಂದು ಬ್ಯೂಟಿಪಾರ್ಲರ್ ಬೇಕು’ ಸರೋಜ ಒತ್ತಾಯಿಸಿದಳು.
‘ಯವ್ವಾ! ವ್ಯವಸಾಯ ನಂಬಿಕೊಂಡು ಬಿಸಿಲು, ಮಳೆ ಎನ್ನದೆ ದಿನಬೆಳಗಾದ್ರೆ ಹೊಲ, ಗದ್ದೆಯಲ್ಲಿ ದುಡಿಯುವ ನಾವು, ಕೆಲ್ಸಕಾರ್ಯ ಬಿಟ್ಟು ಸೌಂದರ್ಯ, ಕೇಶ ವಿನ್ಯಾಸ, ತ್ವಚೆ, ಗೌರವ ವರ್ಣ ಅಂತ ಅಂದ, ಅಲಂಕಾರ ಮಾಡಿಕೊಂಡಿದ್ರೆ ಸಂಸಾರ ಮಾಡ
ಲಾಗುತ್ತೇನೆ? ಮದ್ಯವ್ಯಸನದಂತೆ
ಸೌಂದರ್ಯವ್ಯಸನವೂ ಅಪಾಯಕಾರಿ’
ನಂಜಮ್ಮ ರೇಗಿದಳು.
‘ಗಂಡಸರು ಕುಡಿದು ತೂರಾಡಿದರೆ, ಹೆಂಗಸರು ಅಲಂಕಾರ ಮಾಡಿಕೊಂಡು ತಾರಾ ಡಿದರೆ ಊರು ಉದ್ಧಾರವಾಗುತ್ತಾ? ನಮ್ಮೂರಿಗೆ ಎಣ್ಣೆ ಅಂಗಡಿನೂ ಬೇಡ, ಬ್ಯೂಟಿಪಾರ್ಲರ‍್ರೂ ಬೇಡ’ ಎಂದು ಹೇಳಿ ತಿಮ್ಮಜ್ಜ ಸಭೆಯಿಂದ ಹೊರಟ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.