ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಓಪನ್ ಸರ್ಫಿಂಗ್ l ತಮಿಳುನಾಡು ಸರ್ಫರ್‌ಗಳ ಪಾರಮ್ಯ

ಎಂಟರ ಘಟ್ಟಕ್ಕೆ ಶಿವರಾಜ್‌ ಬಾಬು
Published 1 ಜೂನ್ 2024, 0:37 IST
Last Updated 1 ಜೂನ್ 2024, 0:37 IST
ಅಕ್ಷರ ಗಾತ್ರ

ಮಂಗಳೂರು: ಅಗ್ರ ಶ್ರೇಯಾಂಕಿತ, ತಮಿಳುನಾಡಿನ ಶಿವರಾಜ್ ಬಾಬು ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ಶುಕ್ರವಾರ ಆರಂಭಗೊಂಡ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ನಗರದ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನ ತಮಿಳುನಾಡು ಕ್ರೀಡಾಪಟುಗಳು ಪಾರಮ್ಯ ಮೆರೆದರು.

ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಕ್ರಮಾಂಕದಲ್ಲಿರುವ ಶಿವರಾಜ್‌ ಬಾಬು ರೋಮಾಂಚಕಾರಿ ಪ್ರದರ್ಶನದ ಮೂಲಕ 6.37 ಸ್ಕೋರ್ ಅಂತರದಲ್ಲಿ ಗೆದ್ದು ಸಂಭ್ರಮಿಸಿದರು. 9ನೇ ಕ್ರಮಾಂಕದ ಅಜೀಶ್ ಅಲಿ ಜೊತೆ ಶ್ರೀಕಾಂತ್‌, ಹರೀಶ್ ಎಂ, ತಯಿನ್ ಅರುಣ್‌ ಹಾಗೂ ಮಣಿಕಂಠನ್‌ ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಇರಿಸಿದರು. ಆತಿಥೇಯ ಮಂತ್ರ ಸರ್ಫ್ ಕ್ಲಬ್‌ನ ಸುಬ್ರಮಣಿ ಕ್ವಾರ್ಟರ್ ಫೈನಲ್ ತಲುಪಿದ ಕರ್ನಾಟಕದ ಏಕೈಕ ಕ್ರೀಡಾಪಟು. 

ಎರಡನೇ ಸುತ್ತಿನ ನಾಲ್ಕನೇ ಹೀಟ್‌ನಲ್ಲಿ ಸ್ಪರ್ಧಿಸಿದ ಶಿವರಾಜ್ ಬಾಬು 15.50 ಸ್ಕೋರ್ ಕಲೆ ಹಾಕಿದರು. 9.13 ಸ್ಕೋರು ಗಳಿಸಿದ ಮಣಿಕಂಠನ್ ಇದೇ ಹೀಟ್‌ನಿಂದ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಸೆಲ್ವಂ ಮತ್ತು ಮಂತ್ರ ಸರ್ಫ್ ಕ್ಲಬ್‌ನ ಹಣಮಂತ ಪೂಜಾರ್ ಹೊರಬಿದ್ದರು. ಹಣಮಂತ ಪೂಜಾರ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ಶಿವರಾಜ್‌, ಮೊದಲ ದಿನ ಗರಿಷ್ಠ ಸ್ಕೋರ್ ಕಲೆ ಹಾಕಿದ ಸರ್ಫರ್ ಎಂಬ ಗರಿಮೆಗೂ ಪಾತ್ರರಾದರು. ಎರಡನೇ ಸುತ್ತಿನ 4ನೇ ಹೀಟ್‌ನಲ್ಲಿ ಸ್ಪರ್ಧೆಗೆ ಇಳಿದ ಅಜೀಶ್ ಅಲಿ 15.33 ಸ್ಕೋರ್‌ನೊಂದಿಗೆ ಎರಡನೇ ಅತಿಹೆಚ್ಚು ಸ್ಕೋರ್ ಗಳಿಸಿದ ಕ್ರೀಡಾಪಟು ಎನಿಸಿದರು. ಅಖಿಲನ್ ಎಸ್‌ ಅವರಿಗಿಂತ ಅಜೀಶ್‌ 5.36 ಸ್ಕೋರ್‌ಗಳ ಮುನ್ನಡೆ ಸಾಧಿಸಿದರು.

ದಿನದ ಕೊನೆಯ ಸ್ಪರ್ಧೆ, ಎರಡನೇ ಸುತ್ತಿನ 7ನೇ ಹೀಟ್‌ನಲ್ಲಿ ಶ್ರೀಕಾಂತ್ ಡಿ 13.50 ಸ್ಕೋರ್ ಗಳಿಸಿ ಮಣಿವಣ್ಣನ್ ಟಿ (7.26) ಅವರನ್ನು ಹಿಂದಿಕ್ಕಿದರು.

ಮೊದಲ ದಿನದ ಎರಡನೇ ಸುತ್ತಿನ ಫಲಿತಾಂಶಗಳು: ಪುರುಷರ ಮುಕ್ತ ವಿಭಾಗ: 1ನೇ ಹೀಟ್‌: ಹರೀಶ್ ಎಂ–1. ಸ್ಕೋರು: 12.33, ತಯಿನ್ ಅರುಣ್‌–2 (9.33), ರಾಹುಲ್ ಪನೀರ್‌ಸೆಲ್ವಂ–3 (8.67); 2ನೇ ಹೀಟ್‌: ಅಜೀಶ್ ಅಲಿ–1 (15.33), ಅಖಿಲನ್ ಎಸ್‌–2 (9.97), ದಿನೇಶ್ ಸೆಲ್ವಮಣಿ–3 (7.43), ಕಾರ್ತಿಕ್ ಮುನುಸ್ವಾಮಿ–4 (3.54); 3ನೇ ಹೀಟ್‌: ಸಂಜಯ್‌ ಸೆಲ್ವಮಣಿ–1 (8.33), ಸುಬ್ರಮಣಿ ಎಂ–2 (5.44), ಕಿರಣ್‌ಜೀತ್‌ ಕುಮಾರ್–3 (4.87), ಲೆನಿನ್‌ ಅರುಮುಗಂ–4 (3.60); 4ನೇ ಹೀಟ್‌: ಶಿವರಾಜ್ ಬಾಬು–1 (15.50), ಮಣಿಕಂಠನ್‌ ಐ–2 (9.13), ಸೆಲ್ವಂ ಎಂ–3 (5.77), ಹಣಮಂತ ಪೂಜಾರ್‌–4 (4.43); 5ನೇ ಹೀಟ್‌: ಸೂರ್ಯ ಪಿ–1 (12.66), ಸಂಜಯ್ ಕುಮಾರ್ ಎಸ್‌–2 (8.07), ಸಂತೋಷ್ ಎಂ–3 (6.97), ಮಣಿಕಂಠನ್ ಡಿ (6.37); 6ನೇ ಹೀಟ್‌: ರೂಬನ್‌ ವಿ–1 (8.00), ಮಣಿಕಂಠನ್ ಎಂ–2 (6.36), ಕಲಪತಿ ಎಸ್‌–3 (6.10), ಕಾಮೇಶ್ ಎಸ್‌–4 (2.23); 7ನೇ ಹೀಟ್‌: ಶ್ರೀಕಾಂತ್ ಡಿ–1 (13.50), ಮಣಿವಣ್ಣನ್‌ ಟಿ–2 (7.26), ರಾಜು ಎಸ್‌–3 (6.34).

ಪರಿಸ್ಥಿತಿ ಸವಾಲಿನಿಂದ ಕೂಡಿತ್ತು. ಆದರೂ ಎಂಟು ಅಲೆಗಳನ್ನು ಎದುರಿಸುವ ಅವಕಾಶ ಲಭಿಸಿತು. ಅವೆಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಉತ್ತಮ ಸ್ಕೋರು ಗಳಿಸಲು ಸಾಧ್ಯವಾಯಿತು.
ಶಿವರಾಜ್ ಬಾಬು, ತಮಿಳುನಾಡು ಸರ್ಫರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT