ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ವರ್ಷದಲ್ಲಿ 1ಮೀಟರ್‌ ದಾಟಿದರೆ...

Last Updated 12 ಜುಲೈ 2015, 19:35 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ಈಚೆಗೆ ನಡೆದ ವರ್ಲ್ಡ್‌ ಯೂನಿವರ್ಸಿಟಿ ಗೇಮ್ಸ್‌ನ ಶಾಟ್‌ಪಟ್‌ನಲ್ಲಿ ಇಂದರ್‌ಜಿತ್‌ ಸಿಂಗ್‌ ಚಿನ್ನದ ಪದಕ ಗೆದ್ದ  ಸಂಗತಿ ಭಾರತದ ಅಥ್ಲೆಟಿಕ್ಸ್‌ ಲೋಕದಲ್ಲೊಂದು ಮಹತ್ತರ ಮೈಲುಗಲ್ಲು.  ಇಂದರ್‌ಜಿತ್‌ ಸಾಧನೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಈ ಸಾಧನೆ ನಿರೀಕ್ಷಿತ.

ಆರೂವರೆ ಅಡಿ ಎತ್ತರದ, ಸುಮಾರು ನೂರಿಪ್ಪತ್ತು ಕೆ.ಜಿ.ಗೂ ಹೆಚ್ಚು ತೂಕದ ಈ ಮನುಷ್ಯ ಅಥ್ಲೆಟಿಕ್ಸ್‌ನಲ್ಲಿ ಎತ್ತರವಾದುದನ್ನೇ ಸಾಧಿಸಬಲ್ಲ ಸಮರ್ಥ ಎಂದು ಎಂತಹವರಿಗೂ ಮೊದಲ ನೋಟಕ್ಕೇ ಅನ್ನಿಸಿಬಿಡುತ್ತದೆ. ಆತನ ಸಜ್ಜನಿಕೆಯ ನಡವಳಿಕೆಯಂತೂ ಮನಸ್ಸಿಗೆ ತಟ್ಟುವಂತಹದ್ದು.

ವರ್ಲ್ಡ್‌ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಇವರು ಶಾಟ್‌ಪಟ್‌ನಲ್ಲಿ 19.70 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ರಜತ ಪದಕ ಗೆದ್ದಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಗೆಳೆಯರೊಬ್ಬರು ಇಂದರ್‌ ಜಿತ್‌ ಅವರನ್ನು ಪರಿಚಯಿಸಿದ್ದರು. ಆ ನಂತರ ಅವರು ಹತ್ತಾರು ಸಲ ಮೂಡುಬಿದಿರೆಗೆ ಬಂದು  ಹಲವು ದಿನಗಳ ಕಾಲ ಇದ್ದು ಹೋಗಿದ್ದಾರೆ. ಮೂಡುಬಿದಿರೆಯ ಕ್ರೀಡಾಂಗಣದಲ್ಲಿ ಅವರು ಅಭ್ಯಾಸ ನಡೆಸುವುದನ್ನು ನೋಡುವುದೇ ವಿದ್ಯಾರ್ಥಿಗಳಿಗೊಂದು ಸಂಭ್ರಮ. ಕರಾ ವಳಿಯ ವಿದ್ಯಾರ್ಥಿಗಳ ವಲಯದಲ್ಲಿ ಇಂದರ್‌ಜಿತ್‌  ಜನಪ್ರಿಯ ಎಂಬ ಸಂಗತಿ ಬಹಳ ಮಂದಿಗೆ ಗೊತ್ತಿಲ್ಲ.

ಮೂಡುಬಿದಿರೆಯಲ್ಲಿ ಆಳ್ವಾಸ್‌ ಸಂಸ್ಥೆಯ ವತಿಯಿಂದ ಎರಡು ಸಲ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್‌ ನಡೆದಿದೆ. ಈ ಸಂದರ್ಭಗಳಲ್ಲಿ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟದ ಕ್ರೀಡಾ ಮಂಡಳಿಯ ಮಹಾಕಾರ್ಯದರ್ಶಿ  ಗುರುದೀಪ್‌ ಸಿಂಗ್‌ ಮತ್ತು  ಪಂಜಾಬ್‌ ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ರಾಜಕುಮಾರ್‌ ಶರ್ಮ ಸೇರಿದಂತೆ ಹಲವು ತಜ್ಞರು ಮಾತಿಗೆ ಕುಳಿತಾಗ ಇಂದರ್‌ಜಿತ್‌ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದನ್ನು ಗಮನಿಸಿದ್ದೇನೆ. ಅಂತಹ ತಜ್ಞರ ನಂಬಿಕೆಗಳನ್ನು ಇಂದರ್‌ಜಿತ್‌ ಹುಸಿಗೊಳಿಸಲಿಲ್ಲ. ಅಂತರ ವಾರ್ಸಿಟಿ ಅಥ್ಲೆಟಿಕ್ಸ್‌ನಲ್ಲಿ ಇವರು  ‘ಹೀರೊ’ನಂತೆ ಹೊಳೆದಿದ್ದಾರೆ.

ಕಜಾನ್‌ನಲ್ಲಿ 2013ರಲ್ಲಿ ನಡೆದಿದ್ದ ವಿಶ್ವ ಯೂನಿವರ್ಸಿಟಿ ಅಥ್ಲೆಟಿಕ್ಸ್‌­ನಲ್ಲಿ 19.70 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ಎರಡನೇ ಸ್ಥಾನ ಗಳಿಸಿದ ನಂತರ ಇವರು ಸದಾ ಯಶಸ್ಸಿನ ಹಾದಿಯಲ್ಲೇ ಸಾಗಿದ್ದಾರೆ. ಅದೇ ವರ್ಷ ಪಟಿಯಾಲದಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ 19.89 ಮೀಟರ್ಸ್‌ನ ಸಾಧನೆ ಮಾಡಿದ್ದರು. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ 19.63 ಮೀಟರ್ಸ್‌ ದೂರ ಎಸೆದಿದ್ದ  ಇವರು ಕಂಚಿನ ಪದಕ ಗೆದ್ದಿದ್ದರು.

ಈ ವರ್ಷ ಚೀನಾದ ವುಹಾನ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ 20.41 ಮೀಟರ್ಸ್‌ನ ಸಾಮರ್ಥ್ಯ ತೋರಿ ಚಿನ್ನ ಗೆದ್ದಾಗ ಮೂಡುಬಿದಿರೆಯ ಕ್ರೀಡಾ ಸಕ್ತರೆಲ್ಲರೂ ಬಹಳ ಸಂತಸ ಪಟ್ಟಿದ್ದರು. ಮೂಡುಬಿದಿರೆಯ ಆಸುಪಾಸಿನಲ್ಲಿ ನಡೆದ ಮದುವೆ ಕಾರ್ಯಕ್ರಮಗಳಿಗೆ ನಾನು ಹೋಗುವಾಗ ಜತೆಗೆ ಇಂದರ್‌ ಜಿತ್‌ ಅವರನ್ನೂ ಕರೆದುಕೊಂಡು ಹೋಗಿದ್ದೇನೆ. ಅಲ್ಲಿ  ಜನರೊಡನೆ ಅವರು ಬೆರೆಯುತ್ತಿದ್ದ ಪರಿ ಬೆರಗು ಉಂಟು ಮಾಡಿತ್ತು.

ಈಚೆಗೆ ನನ್ನ ಪರಿಚಿತರು ಸಿಕ್ಕಿದಾಗ ಅವರು ‘ಇಂದರ್‌ಜಿತ್ ಅಲ್ಲಿ ಮೆಡಲ್‌ ಮಾಡಿದ್ದಾನಂತಲ್ಲ, ಇಲ್ಲಿ ಗೋಲ್ಡ್‌ ಗೆದ್ದಿದ್ದಾನಂತಲ್ಲ, ಪೇಪರ್‌ನಲ್ಲಿ ನೋಡಿದೆ..’ ಎಂದು ಲೋಕಾಭಿರಾಮವಾಗಿ ಮಾತನಾಡುತ್ತಾರೆ. ಮೂಡುಬಿದಿರೆಯಲ್ಲಿರುವ ನಮ್ಮ ಸಂಸ್ಥೆಯ ಆಯುರ್ವೇದ ಕೇಂದ್ರದಲ್ಲಿ ನಿತ್ಯವೂ ಮಸಾಜ್‌ ಮಾಡಿಸಿ ಕೊಳ್ಳುತ್ತಿದ್ದ ಇಂದರ್‌ಜಿತ್‌, ತಮ್ಮ ಕೋಚ್‌ ಪ್ರೀತಮ್‌ ಸಿಂಗ್‌ ಅವರಿಂದ ದೂರವಾಣಿ ಮೂಲಕ ಸಲಹೆಗಳನ್ನು ಪಡೆದುಕೊಂಡು ಸ್ವರಾಜ್‌ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರು.

ಯಾವುದೋ ಊರಿನ ಅಥ್ಲೀಟ್‌ ಒಬ್ಬ ತನಗೆ ಸಂಪೂರ್ಣ ಅಪರಿಚಿತವಾದ ಊರಿಗೆ ಬಂದು ಅಲ್ಲಿ ಜನರ ಪ್ರೀತಿಗೆ ಪಾತ್ರನಾಗುವುದಿದೆಯಲ್ಲಾ, ಇದಕ್ಕೆ ಇಂದರ್‌ಜಿತ್‌್ ಸ್ಪಷ್ಟ ನಿದರ್ಶನ. ಎರಡೂವರೆ ತಿಂಗಳ ಹಿಂದೆ ಇವರು ಮಂಗಳೂರಿನಲ್ಲಿ ನಡೆದ ಫೆಡರೇಷನ್‌ ಕಪ್‌ ಕೂಟದಲ್ಲಿ 20.65 ಮೀಟರ್ಸ್‌ ದೂರ ಎಸೆದು ಚಿನ್ನ ಗೆದ್ದರು. ಈಗ ಮೂಡುಬಿದಿರೆಯ ಕ್ರೀಡಾಸಕ್ತರೆಲ್ಲರಿಗೂ ಜರ್ಮನಿಯ ಡೇವಿಡ್‌ ಸ್ಟಾರ್ಲ್‌ ಹೆಸರೂ ಗೊತ್ತಿದೆ.

ಏಕೆಂದರೆ ಸ್ಟಾರ್ಲ್‌ 21.94 ಮೀಟರ್ಸ್‌ ದೂರದ ಸಾಧನೆಯೊಂದಿಗೆ  ಶಾಟ್‌ಪಟ್‌ನಲ್ಲಿ ವಿಶ್ವ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈಗ ಇಂದರ್‌ಜಿತ್‌ ಎದುರು ಕನಿಷ್ಠ ಒಂದು ಮೀಟರ್‌ನ ಸವಾಲು ಇದೆ. ಇನ್ನೊಂದು ವರ್ಷದಲ್ಲಿ ಆ ಒಂದು ಮೀಟರ್‌ ಗಡಿ ದಾಟಿದರೆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೊಂದು ಪದಕ   ಖಚಿತ. ಹೇಗೂ ಇವರು ರಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಿಟ್ಟಿಸಿದ್ದಾರಲ್ಲ. ಈ ಹೆಗ್ಗನಸು ಇರಿಸಿಕೊಂಡೇ ಆಳ್ವಾಸ್‌ ಕ್ರೀಡಾ ಪ್ರತಿಷ್ಠಾನವು ಇಂದರಜಿತ್‌ಗೆ ಮುಂದಿನ ಒಲಿಂಪಿಕ್ಸ್‌ವರೆಗೆ ಹಣಕಾಸಿನ ನೆರವು ನೀಡುವ ನಿರ್ಧಾರ ಕೈಗೊಂಡಿದೆ.

ನಾನು ಕಂಡ ಅತ್ಯಂತ ಬದ್ಧತೆ ಹೊಂದಿರುವ ಮತ್ತು ಕಷ್ಟಸಹಿಷ್ಣು ಕ್ರೀಡಾಪಟು ಇಂದರ್‌ಜಿತ್‌. ಈಚೆಗೆ ಏಷ್ಯಾ ಗ್ರ್ಯಾಂಡ್‌ಪ್ರಿ ಅಥ್ಲೆಟಿಕ್ಸ್‌ ಸರಣಿಯಲ್ಲಿ ಮೂರು ಚಿನ್ನ,  ಗ್ವಾಂಗ್‌ಜುನಲ್ಲಿ ಒಂದು ಚಿನ್ನ ಗೆದ್ದಾಗಲೆಲ್ಲಾ ನನಗಷ್ಟೇ ಅಲ್ಲ, ಮೂಡುಬಿದಿರೆಯ ಹಲವರಿಗೆ ಅವರು ಫೋನ್‌ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದರು. ಅವರ ಬದುಕಲ್ಲಿ ಇಂತಹ ಹಲವು ಸಂದರ್ಭಗಳು ಬರುವಂತಾಗಲಿ.

(ಲೇಖಕರು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT