ಮೊದಲು ಎಚ್. ಎನ್. ಗಿರೀಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತದಂಥ ದೊಡ್ಡ ದೇಶ ಕೇವಲ ಆರು ಪದಕಗಳನ್ನು ಗೆದ್ದರೂ, ಅದು ಹಿಂದೆಂದಿಗಿಂತಲೂ ಹೆಚ್ಚಾಗಿದ್ದರಿಂದ ನಾವೆಲ್ಲರೂ ಸಂಭ್ರಮಪಡುವಂತಾಗಿತ್ತು. ಈಗ ಮತ್ತೆ ನಮಗೆಲ್ಲ ಸಂತಸ ತಂದವರು ಗಿರೀಶ್.

ಅದೇ ಲಂಡನ್ ಒಲಿಂಪಿಕ್ ಕ್ರೀಡಾಂಗಣದಲ್ಲಿ, ಅಂಗವಿಕಲರಿಗಾಗಿ ನಡೆದ ಪ್ಯಾರಾಲಿಂಪಿಕ್ಸ್ನ ಹೈಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದವರು ಗಿರೀಶ್. ಹಾಸನದ ಬಡ ಕುಟುಂಬದವರಾದ ಗಿರೀಶ್ ಸಾಧನೆ ಎಲ್ಲರೂ ಹೆಮ್ಮೆಪಡುವಂಥದ್ದೇ. ಅವರು ಗೆದ್ದ ಪದಕವನ್ನು, ತಮ್ಮಂತೆಯೇ ವಿಕಲಾಂಗರಾಗಿರುವವರಿಗೆ ಅರ್ಪಿಸಿರುವುದು ಅವರ ಅಭಿಮಾನದ ಪ್ರತೀಕ.

ಈಗ ಗಿರೀಶ್ ಅವರ ಜೊತೆಯೇ ಇನ್ನೊಬ್ಬರಿಗೆ ಅಭಿನಂದನೆ ಹೇಳಲೇಬೇಕು. ಅನುಕಂಪದಿಂದ ಅಲ್ಲ ಅಭಿಮಾನದ ಪುರಸ್ಕಾರ ಕೊಟ್ಟಿದ್ದಕ್ಕಾಗಿ. ಲಂಡನ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕಕ್ಕೆ ಪಾತ್ರರಾದ ಸೈನಾ ನೆಹ್ವಾಲ್ ಎರಡು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.

ಗಿರೀಶ್ಗೆ ಸರ್ಕಾರ ಕೊಡುವ ಬಹುಮಾನದ ಮೊತ್ತ ಬರಲು ತಡವಾಗಬಹುದು, ಅದರ ಬಹುಭಾಗ ಕೈಸೇರುವ ಹೊತ್ತಿಗೆ ಕರಗಲೂಬಹುದು. ಆದರೆ ಸೈನಾ ಕೊಡುವ ಬಹುಮಾನಕ್ಕೆ ಅಂಥ ಆತಂಕವೇನೂ ಇರುವುದಿಲ್ಲ. ಸೈನಾ ಅವರ ಹೃದಯವೈಶಾಲ್ಯವನ್ನು ಮೆಚ್ಚಲೇಬೇಕು.

ದೇಶದಲ್ಲಿ ಎಷ್ಟೋ ಮಂದಿ ಶ್ರೀಮಂತ ಕ್ರೀಡಾಪಟುಗಳಿದ್ದಾರೆ. ಅಂಗವಿಕಲ ಕ್ರೀಡಾಪಟುಗಳ ಬಗ್ಗೆ ಯಾರಿಗೂ ಸಹಜವಾಗಿಯೇ ಅಷ್ಟೊಂದು ಆಸಕ್ತಿ ಇರುವುದಿಲ್ಲ. ಅಯ್ಯೋ ಪಾಪ ಎನ್ನುತ್ತಾರೆಯೇ ಹೊರತು ಬೆನ್ನು ತಟ್ಟುವವರು ಕಡಿಮೆ. ಇಂಥ ಸಂದರ್ಭದಲ್ಲಿ ಸೈನಾ ತಡಮಾಡದೇ ತಮ್ಮ ಕಿಸೆಯಿಂದ ಎರಡು ಲಕ್ಷ ತೆಗೆದುಕೊಡುವುದು ನಿಜಕ್ಕೂ ಅಭಿನಂದನಾರ್ಹ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಂಗವಿಕಲರ ರಾಷ್ಟ್ರೀಯ ಸಂಸ್ಥೆ ಗಿರೀಶ್ಗೆ ಬಹುಮಾನ ಘೋಷಿಸಿವೆ. ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್, ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಅಧಿಕಾರಿ ಹುದ್ದೆ ಕೊಡುವುದಾಗಿ ಪ್ರಕಟಿಸಿದ್ದಾರೆ. ಕ್ರೀಡೆಯಲ್ಲಿನ ಯಶಸ್ಸು ಗಿರೀಶ್ ಅವರ ಬದುಕಿನ ಅದೃಷ್ಟದ ಬಾಗಿಲನ್ನು ತೆರೆದಿದೆ.

ಇದು ಉಳಿದ ಕ್ರೀಡಾಪಟುಗಳಿಗೂ ಸ್ಫೂರ್ತಿ ನೀಡುವ ಅಂಶ. ಗಿರೀಶ್ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಅಧಿಕಾರಿಯಾಗಿ ಸೇರಿದರೆ, ಮುಂದೆ ಅಂಗವಿಕಲ ಕ್ರೀಡಾಪಟುಗಳಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಆಗ ಅವರ ಬೆಳ್ಳಿ ಪದಕದ ಹೊಳಪು ಇನ್ನಷ್ಟು ಹೆಚ್ಚುತ್ತದೆ.

ಆದರೆ ಕ್ರೀಡಾ ವ್ಯವಸ್ಥೆಯ ದಾರಿ ದುರ್ಗಮವಾಗಿದೆ. ಈಗ ಅವರಿಗೆ ಬರುವ ಬಹುಮಾನದ ಹಣದಲ್ಲೇ ಕಮಿಷನ್ ಕೇಳುವ ಭಂಡರೂ ಇದ್ದಾರೆ. ಭಾರತದ ಕ್ರೀಡಾರಂಗ ಹಾಳಾಗಿದ್ದು, ಸಂಸ್ಥೆ ಮತ್ತು ಫೆಡರೇಷನ್ಗಳಲ್ಲಿ ತುಂಬಿರುವ ಭ್ರಷ್ಟ ಅಧಿಕಾರಿಗಳಿಂದಲೇ ಹೊರತು ಬಡ ಕ್ರೀಡಾಪಟುಗಳಿಂದಲ್ಲ.

ಅರ್ಜುನ ಪ್ರಶಸ್ತಿಗಾಗಿ ನಡೆಯುವ ಸೆಣಸಾಟದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರಶಸ್ತಿ ಜೊತೆ ಬರುವ ಮೊತ್ತದಲ್ಲಿ ಅರ್ಧದಷ್ಟು ಮೊದಲೇ ಅಧಿಕಾರಿಗಳ ಜೇಬಿಗೆ ಹೋಗಿಬಿಡುತ್ತದೆ. ಹಣ ಕೊಡದಿದ್ದರೆ ಆ ಫೈಲ್ ಮುಂದಕ್ಕೆ ಹೋಗುವುದೇ ಇಲ್ಲ. ಆದರೂ ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಯ ಬೆನ್ನುಹತ್ತುವುದು ತಪ್ಪಿಲ್ಲ.

ಯಾಕೆಂದರೆ ಪ್ರಶಸ್ತಿಯ ಮೋಹ ಅವರ ಮನಸ್ಸನ್ನು ತುಂಬಿಬಿಟ್ಟಿದೆ. ಹೇಗಾದರೂ ಮಾಡಿ ಪ್ರಶಸ್ತಿ ಪಡೆಯಬೇಕೆಂಬ ಗುರಿಯಲ್ಲಿ, ಕ್ರೀಡಾಪಟುಗಳು ಬಾಯಿ ಮುಚ್ಚಿಕೊಂಡು ಹಣ ಕೊಡುತ್ತಾರೆ. ಎಷ್ಟೋ ಮಂದಿ ದುಡ್ಡು ಕೊಟ್ಟು, ಪ್ರಶಸ್ತಿಯೂ ಇಲ್ಲದೇ ಕಳೆದುಕೊಂಡಿದ್ದಾರೆ. ಆದರೆ ಅದನ್ನು ಹೇಳುವ ಧೈರ್ಯ ಯಾರಿಗೂ ಇಲ್ಲ.

ಹಣ ಕೊಟ್ಟಿದ್ದಕ್ಕೆ ಯಾವುದೇ ಪುರಾವೆಯೂ ಇರುವುದಿಲ್ಲ. ಕ್ರೀಡಾಧಿಕಾರಿಗಳ ಶೋಷಣೆ ಮುಂದುವರಿಯುತ್ತಲೇ ಇದೆ. ಯಾವ ಸರ್ಕಾರದಿಂದಲೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಒಲಿಂಪಿಕ್ಸ್ ಆಗಲೀ ಅಥವಾ ಬೇರೆ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟವಾಗಲಿ, ಪದಕ ಗೆದ್ದರೆ ಮಾತ್ರ ಮರ್ಯಾದೆ ಸಿಗುತ್ತದೆ. ಗಮನಾರ್ಹ ಪ್ರದರ್ಶನ ನೀಡಿದರೂ ಪದಕ ದೊರೆಯದಿದ್ದರೆ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಲಂಡನ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಪಿ. ಕಶ್ಯಪ್ ಅವರಿಗೆ ಈಗ ಸಮಸ್ಯೆ ಎದುರಾಗಿದೆ.

ಅವರಿಗೆ ಹಣಕಾಸಿನ ನೆರವು ನೀಡಲು ಯಾವ ಪ್ರಾಯೋಜಕರೂ ದೊರೆಯುತ್ತಿಲ್ಲ. ಇಂದಿನ ಕ್ರೀಡಾರಂಗದಲ್ಲಿ ಹಣದ ಬೆಂಬಲ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಕ್ರೀಡಾ ಸಲಕರಣೆಗಳು ದುಬಾರಿಯಾಗಿವೆ. ತರಬೇತಿಗೆ ಬಹಳ ಹಣ ಬೇಕು. ಕಶ್ಯಪ್ ಮುಂದಿನ ಏಷ್ಯನ್ ಕ್ರೀಡೆಗಳು ಅಥವಾ ಒಲಿಂಪಿಕ್ಸ್ಗೆ ತಯಾರಿ ನಡೆಸಲು ಹಣ ಬೇಕೇಬೇಕು. ಖಾಸಗಿ ಪ್ರಾಯೋಜಕರು ಸಿಗದಿದ್ದರೆ ಕಷ್ಟ.

ಹಾಕಿ ಪರಿಸ್ಥಿತಿ ಏನಾಗಿದೆ ನೋಡಿ. ಅದಿನ್ನು ಉದ್ಧಾರವಾಗುವುದಿಲ್ಲ ಬಿಡಿ. ಏನಾದರೂ ಪವಾಡ ಆಗಬೇಕಷ್ಟೇ. ಹಾಕಿಯಲ್ಲಿನ ಜಗಳ ಬಗೆಹರಿಯುವುದೇ ಇಲ್ಲವೇನೋ! ಹಾಕಿ ರಂಗಕ್ಕೆ ಈಗ ಸರಿಯಾದ ಯಜಮಾನನೇ ಇಲ್ಲ. ಭಾರತ ಹಾಕಿ ಫೆಡರೇಷನ್ ರಾಜಕೀಯಕ್ಕೆ ಕಡಿವಾಣ ಹಾಕಲು ಭಾರತ ಒಲಿಂಪಿಕ್ ಸಂಸ್ಥೆ `ಹಾಕಿ ಇಂಡಿಯಾ~ ಸಂಸ್ಥೆಯನ್ನು ಹುಟ್ಟುಹಾಕಿತು.

ಲಂಚ ಹೊಡೆದ ಆರೋಪದ ಮೇಲೆ ಜೈಲು ಸೇರಿ, ವಿಚಾರಣೆ ಎದುರಿಸುತ್ತಿರುವ ಒಲಿಂಪಿಕ್ ಸಂಸ್ಥೆ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಈ ಹಾಕಿ ಇಂಡಿಯಾ ರಚನೆಗೆ ಕಾರಣರಾದವರು. ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ `ವುಡನ್ ಸ್ಪೂನ್~ ಪಡೆದಾಗ ಅಂದರೆ 12 ತಂಡಗಳಲ್ಲಿ ಕೊನೆಯ ಸ್ಥಾನ ಗಳಿಸಿದಾಗ, ಭಾರತದ ಹಾಕಿ ವ್ಯವಹಾರವನ್ನು ಯಾರು ನಿರ್ವಹಿಸಬೇಕು ಎಂಬುದನ್ನು ನಿರ್ಧರಿಸಲು ಒಲಿಂಪಿಕ್ ಸಂಸ್ಥೆ ಮೂವರು ಸದಸ್ಯರ ಒಂದು ಸಮಿತಿ ರಚಿಸಿತು.

ಅವರಲ್ಲಿ ಒಬ್ಬರೂ ಹಾಕಿಗೆ ಸಂಬಂಧಪಟ್ಟವರಾಗಿರಲಿಲ್ಲ. ಕುಸ್ತಿ, ವೇಟ್ಲಿಫ್ಟಿಂಗ್ ಮತ್ತು ಹ್ಯಾಂಡ್ಬಾಲ್ ಫೆಡರೇಷನ್ ಅಧಿಕಾರಿಗಳಾಗಿದ್ದ ಅವರನ್ನು ಈ ಸಮಿತಿಯಲ್ಲಿ ಯಾಕೆ ನೇಮಿಸಲಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಹಾಕಿ ಫೆಡರೇಷನ್ ರಾಜಕೀಯ ಅವರಿಗೆ ಗೊತ್ತಿರಬಹುದು. ಆದರೆ ಹಾಕಿ ರಂಗದಲ್ಲಿ ರಾಜಕೀಯವೊಂದೇ ಸಮಸ್ಯೆಯಲ್ಲ. ಅಂತರರಾಷ್ಟ್ರೀಯ ರಂಗದಲ್ಲಿ ಕುಸಿದುಹೋಗಿರುವ ಭಾರತ ತಂಡವನ್ನು ಮೇಲಕ್ಕೆತ್ತುವ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ.

ಅಲ್ಲದೇ, ಭಾರತ ಒಲಿಂಪಿಕ್ ಸಂಸ್ಥೆ ರಚಿಸಿರುವ ಈ ಸಮಿತಿ, ಸಂಸ್ಥೆಯ ಭಾಗವೇ ಆಗಿರುವ ಹಾಕಿ ಇಂಡಿಯಾ ಪರವಾಗಿಯೇ ಶಿಫಾರಸು ಮಾಡುವುದು ನಿರೀಕ್ಷಿತವೇ ಆಗಿತ್ತು. ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಕೇಂದ್ರ ಸರ್ಕಾರವೇ ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಏನಾದರೂ ಬದಲಾವಣೆ ಆಗಬಹುದು. ಇಲ್ಲದಿದ್ದರೆ ಭಾರತದ ಹಾಕಿಗೆ ಯಾವ ಭವಿಷ್ಯವೂ ಇರುವುದಿಲ್ಲ.

ಬರುವ ಡಿಸೆಂಬರ್ನಲ್ಲಿ ವಿಶ್ವ ಹಾಕಿ ಸರಣಿ ನಡೆಯಲಿದೆ. ಭಾರತ ಹಾಕಿ ಫೆಡರೇಷನ್ ಮತ್ತು ನಿಂಬಸ್ ಸ್ಪೋರ್ಟ್ಸ್ ಜಂಟಿಯಾಗಿ ಈ ಸರಣಿ ನಡೆಸಲಿವೆ. ಇದರಲ್ಲಿ ಆಡಬಾರದು, ಆಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಹಾಕಿ ಇಂಡಿಯಾ ಹೇಳುವ ಸಾಧ್ಯತೆ ಇದೆ. ತಿಕ್ಕಾಟ ಹೀಗೇ ಮುಂದುವರಿಯುತ್ತ ಆಟಗಾರರು ಬಲಿಪಶುವಾಗುತ್ತಾರೆ.

ಕ್ರೀಡಾ ಸಚಿವ ಅಜಯ್ ಮಾಕನ್ ಬಂದೂಕು ಹಿಡಿದುಕೊಂಡು ಹಾಕಿ ಬಗ್ಗೆ ಗಮನ ಕೊಡುವ ಅಗತ್ಯ ಇದೆ. 2020 ರ ಒಲಿಂಪಿಕ್ ಕ್ರೀಡೆಗಳಲ್ಲಿ 25ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿ ಹೊಂದಿರುವ ಮಾಕನ್ ಬಿಗಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕ್ರೀಡಾರಂಗ ಎಚ್ಚೆತ್ತುಕೊಳ್ಳುವುದಿಲ್ಲ.

ಭಾರತ ಹಾಕಿ ನಿರ್ವಹಣೆಯನ್ನು ಸೇನೆಗೆ ಒಪ್ಪಿಸಬೇಕು ಎಂಬ ಸಲಹೆ ಹಿಂದೊಮ್ಮೆ ಬಂದಿತ್ತು. ಎಲ್ಲರೂ ಹೆದರುವುದು ಬಂದೂಕಿಗೆ ಮಾತ್ರ ಎಂಬ ಅರ್ಥವೂ ಇದರಲ್ಲಿತ್ತು. ಅದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಆದರೆ ಹಾಕಿ ರಂಗವನ್ನು ಪಾತಾಳದಿಂದ ಮೇಲಕ್ಕೆತ್ತಲು ಒಬ್ಬ ಬಲಿಷ್ಠ, ಸಮರ್ಥ ನಾಯಕನಂತೂ ಬೇಕೇಬೇಕು.

ಇವೆಲ್ಲ ಮುಗಿಯದ ಕಥೆ. ಕ್ರಿಕೆಟ್ ಮಾತ್ರ ತನ್ನ ಖ್ಯಾತಿ, ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆದಿದೆ. 19 ವರ್ಷದೊಳಗಿನವರ ಭಾರತ ತಂಡವೂ ವಿಶ್ವ ಕಪ್ ಕಿರೀಟ ಧರಿಸಿದೆ. ಕಳೆದ ವರ್ಷ ದೋನಿಪಡೆ ವಿಶ್ವ ಚಾಂಪಿಯನ್ ಆಗಿದ್ದರೆ ಈ ವರ್ಷ ಉನ್ಮುಕ್ತ್ ಚಾಂದ್ ಅವರ ಕಿರಿಯರ ತಂಡ ಕ್ರಿಕೆಟ್ ಹುಚ್ಚಿಗೆ ಜೇನುತುಪ್ಪ ಸವರಿದೆ.

ಕೆಲವು ವರ್ಷಗಳ ಹಿಂದೆ ಭಾರತದ 19 ವರ್ಷದೊಳಗಿನವರ ತಂಡ ವಿಶ್ವ ಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದಾಗ, ಇಂಗ್ಲೆಂಡ್ನ ಹಿರಿಯ ಕ್ರಿಕೆಟ್ ಲೇಖಕರೊಬ್ಬರು ಬರೆದಿದ್ದ ಮಾತು ನೆನಪಾಗುತ್ತದೆ. ಈ ಕಿರಿಯರ ವಿಶ್ವ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಚೆನ್ನಾಗಿ ಆಡಿದವು. ಆದರೆ ಎರಡೂ ತಂಡಗಳಲ್ಲಿ 19 ವರ್ಷ ದಾಟಿದ ಆಟಗಾರರೇ ತುಂಬಿದ್ದರು ಎಂಬುದೂ ಸುಳ್ಳಲ್ಲ.

ಬೇರೆ ಯಾವ ತಂಡವೂ ಈ ಮೋಸ ಮಾಡಿಲ್ಲ ಎಂಬ ಅವರ ಟೀಕೆ ಸುಳ್ಳೇನೂ ಆಗಿರಲಿಲ್ಲ. ಕ್ರಿಕೆಟ್ನಲ್ಲಿ ಆ ಪಿಡುಗು ಇದ್ದೇ ಇದೆ. ತಂದೆ-ತಾಯಿ, ತರಬೇತುದಾರರು, ಆಯ್ಕೆಗಾರರು, ಸಂಸ್ಥೆಗಳ ಪದಾಧಿಕಾರಿಗಳು ಇದರಲ್ಲಿ ಸಮಭಾಗಿಗಳಾಗಿದ್ದಾರೆ. ಹಣದ ಬಲದಿಂದ ವಯಸ್ಸಿನ ಸುಳ್ಳು ಸರ್ಟಿಫಿಕೆಟ್ ತರುವುದು ಕಷ್ಟವೇನಲ್ಲ.

ಇದರ ವಿರುದ್ಧ ಧ್ವನಿ ಎತ್ತಿದವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಈ ಸಲ ಭಾರತ ಕಿರಿಯರ ತಂಡ ಜಯಶಾಲಿಯಾದಾಗ ಯಾರಿಂದಲೂ ಅಂಥ ಟೀಕೆ ಬರಲಿಲ್ಲ ಎಂಬುದೇ ಸಮಾಧಾನಕರ ಅಂಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.